ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ. ಸಿಕ್ಕರೂ ಮನೆ ಬಾಡಿಗೆಯ 10 ಪಟ್ಟು ಹೆಚ್ಚಿನ ಅಡ್ವಾನ್ಸ್ ಕೊಡಬೇಕು. ಅಂದರೆ, ತಿಂಗಳಿಗೆ 10 ಸಾವಿರ ರೂಪಾಯಿ ಬಾಡಿಗೆ ಇದ್ದರೆ, 1 ಲಕ್ಷ ರೂಪಾಯಿ ಅಡ್ವಾನ್ಸ್ ಕೊಡಬೇಕು. ಆದರೆ, ಕೇಂದ್ರ ಸರ್ಕಾರವು ಈಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇನ್ನುಮುಂದೆ 2 ತಿಂಗಳ ಬಾಡಿಗೆಯಷ್ಟು ಅಡ್ವಾನ್ಸ್ ಕೊಟ್ಟರೆ ಸಾಕು ಎಂದು ತಿಳಿಸಿದೆ. ಇದರಿಂದ ಬಾಡಿಗೆದಾರರಿಗೆ ಭಾರಿ ಅನುಕೂಲವಾಗಲಿದೆ.
ಮುಂದಿನ ವರ್ಷದಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿದುಬಂದಿದೆ. ಮನೆ ಬಾಡಿಗೆಯ ಕರಾರು ಪತ್ರವನ್ನು ಆನ್ ಲೈನ್ ಮೂಲಕವೇ ಮಾಡಿಸಿಕೊಳ್ಳುವುದು, ಬಾಡಿಗೆದಾರರಿಗೆ ಮನೆ ಖಾಲಿ ಮಾಡುವಂತೆ ಒತ್ತಾಯಿಸದಿರುವುದು ಸೇರಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ಈ ಕುರಿತು ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹೊಸ ನಿಯಮಗಳು ಇಲ್ಲಿವೆ
• ಬಾಡಿಗೆ ಮನೆಯಾದರೆ 2 ತಿಂಗಳ ಬಾಡಿಗೆ ಅಡ್ವಾನ್ಸ್, ವಾಣಿಜ್ಯ ಕಟ್ಟಡಗಳಿಗೆ 6 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ಆಗಿ ಪಡೆಯಬೇಕು.
• ಮನೆ ಮಾಲೀಕರು 12 ತಿಂಗಳ ಬಳಿಕವಷ್ಟೇ ಬಾಡಿಗೆ ಹಣವನ್ನು ಹೆಚ್ಚಿಸಬಹುದು. ಬಾಡಿಗೆ ಹೆಚ್ಚಿಸುವ 90 ದಿನಗಳ ಮೊದಲು ಮಾಹಿತಿ ನೀಡಿರಬೇಕು.
• ಮನೆ ಖಾಲಿ ಮಾಡುವಂತೆ ಬಾಡಿಗೆದಾರರನ್ನು ಮಾಲೀಕರು ಒತ್ತಾಯಿಸುತ್ತಿಲ್ಲ. ಬೆದರಿಕೆ ಹಾಕುವುದು, ಮನೆಗೆ ಬೀಗ ಹಾಕುವುದು, ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸುವಂತಿಲ್ಲ.
• ಬಾಡಿಗೆ ನ್ಯಾಯಾಧೀಕರಣದಿಂದ ಆದೇಶ ಪತ್ರ ತಂದರೆ ಮಾತ್ರ ಬಾಡಿಗೆದಾರರನ್ನು ಖಾಲಿ ಮಾಡಿಸಬಹುದು.
• ಮನೆಯ ರಿಪೇರಿ ಇದ್ದರೆ, 24 ಗಂಟೆಗಳ ಮೊದಲು ಬಾಡಿಗೆದಾರರಿಗೆ ಮಾಹಿತಿ ನೀಡಬೇಕು. ಬಾಡಿಗೆದಾರನು ಕೂಡ ರಿಪೇರಿ ಮಾಡಿಸಬೇಕು ಎಂದು ಮಾಲೀಕರಿಗೆ ತಿಳಿಸಬೇಕು. ಮಾಲೀಕರು 30 ದಿನದಲ್ಲಿ ರಿಪೇರಿ ಮಾಡಿಸದಿದ್ದರೆ ಬಾಡಿಗೆದಾರನೇ ಮಾಡಿಸಿ, ಅದರ ಹಣವನ್ನು ಬಾಡಿಗೆ ಮೊತ್ತದಲ್ಲಿ ಕಡಿತ ಮಾಡಿಕೊಳ್ಳಬಹುದು.
ಇದನ್ನೂ ಓದಿ: ದೇಶದಲ್ಲಿ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ | 550ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್ ; ಪ್ರಯಾಣಿಕರ ಆಕ್ರೋಶ



















