ಬೆಂಗಳೂರು: ಸ್ವಂತದ್ದೊಂದು ಅಪಾರ್ಟ್ ಮೆಂಟ್ ಖರೀದಿಗೋ, ಹೊಸದೊಂದು ಕಾರು ಖರೀದಿಗೂ ಸಾಲ ಮಾಡಿರುತ್ತಾರೆ. ಪ್ರತಿ ತಿಂಗಳ ಸಂಬಳದಲ್ಲಿ ಸಾಲದ ಇಎಂಐಗಳನ್ನೂ ಸರಿಯಾದ ಸಮಯಕ್ಕೆ ಕಟ್ಟುತ್ತಿರುತ್ತಾರೆ. ಹೀಗೆ, ಸಾಲ ಮಾಡಿದ ವ್ಯಕ್ತಿಯು ಸಾಲ ತೀರುವ ಮೊದಲೇ ದಿಢೀರನೆ ನಿಧನರಾದರೆ ಆ ಸಾಲ ಏನಾಗುತ್ತದೆ? ಉಳಿದ ಸಾಲದ ಮೊತ್ತವನ್ನು ಬ್ಯಾಂಕುಗಳು ಮನ್ನಾ ಮಾಡುತ್ತವೆಯೇ? ಆತನ ಪತ್ನಿ, ಮಕ್ಕಳು ಸಾಲ ತೀರಿಸಬೇಕಾ? ನಿಯಮಗಳು ಏನು ಹೇಳುತ್ತವೆ? ತಿಳಿಯೋಣ ಬನ್ನಿ.
ಸಾಮಾನ್ಯವಾಗಿ, ಅಪಾರ್ಟ್ ಮೆಂಟ್ ಖರೀದಿಸುವಾಗ, ಮನೆ ನಿರ್ಮಾಣಕ್ಕಾಗಿ ಸಾಲ ನೀಡುವಾಗ, ಆಯಾ ಬ್ಯಾಂಕ್ ಗಳು ಸಾಲ ಮಾಡುವ ವ್ಯಕ್ತಿಗೆ ಇನ್ಶೂರೆನ್ಸ್ ಮಾಡಿಸುತ್ತವೆ. ಸಾಲದ ಮೇಲಿನ ಮೊತ್ತದ ಗ್ಯಾರಂಟಿಗಾಗಿ ವಿಮೆ ಮಾಡಿಸುತ್ತವೆ. ಆಗ, ವ್ಯಕ್ತಿ ಏನಾದರೂ ದಿಢೀರನೆ ಮೃತಪಟ್ಟರೆ, ಆತನ ಹೆಸರಿನ ವಿಮೆಯನ್ನು ಕ್ಲೇಮ್ ಮಾಡಿಕೊಳ್ಳುವ ಮೂಲಕ ಸಾಲದ ಮೊತ್ತಕ್ಕೆ ಜಮೆ ಮಾಡಿಕೊಳ್ಳುತ್ತವೆ.
ಹಾಗೊಂದು ವೇಳೆ, ವ್ಯಕ್ತಿಯ ಸಾಲಕ್ಕೆ ವಿಮೆ ಇರದಿದ್ದರೆ, ಟರ್ಮ್ ಇನ್ಶೂರೆನ್ಸ್ ಕೂಡ ಇರದಿದ್ದರೆ, ಬ್ಯಾಂಕ್ ಗಳು ಆ ವ್ಯಕ್ತಿ ಹೆಸರಿನಲ್ಲಿರುವ ಹೂಡಿಕೆ, ಉಳಿತಾಯ ಖಾತೆ, ಪಿತ್ರಾರ್ಜಿತ ಆಸ್ತಿ ಇರುವುದನ್ನು ದೃಢಪಡಿಸಿಕೊಳ್ಳುತ್ತವೆ. ವ್ಯಕ್ತಿ ಹೆಸರಿನಲ್ಲಿ ಆಸ್ತಿ ಇದ್ದರೆ, ಅದನ್ನು ಮಾರಾಟ ಮಾಡಿ ಸಾಲವನ್ನು ವಸೂಲಿ ಮಾಡುತ್ತವೆ. ಇಬ್ಬರು ಕೂಡ ಸಾಲ ಪಡೆದಿದ್ದರೆ, ಮತ್ತೊಬ್ಬ ವ್ಯಕ್ತಿ ಸಾಲ ನೀಡಬೇಕು. ಸಾಲಕ್ಕೆ ಗ್ಯಾರಂಟೇಟರ್ ಆಗಿ ಸಹಿ ಹಾಕಿದ್ದರೆ, ಉಳಿದ ಸಾಲದ ಕಂತುಗಳನ್ನು ಆ ವ್ಯಕ್ತಿ ತೀರಿಸಬೇಕು ಎಂಬ ನಿಯಮಗಳಿವೆ.
ಆದರೆ, ಸಾಲ ಮಾಡಿದ ವ್ಯಕ್ತಿಯು ದಿಢೀರನೆ ನಿಧನರಾದರೆ, ಉಳಿದ ಸಾಲದ ಕಂತುಗಳನ್ನು ಆತನ ಪತ್ನಿ, ಮಕ್ಕಳು ತೀರಿಸಬೇಕು ಎಂಬ ನಿಯಮವಿಲ್ಲ. ಸಾಲ ಮಾಡಿದ ವ್ಯಕ್ತಿಯ ವಾರಸುದಾರರು ಕೂಡ ಸಾಲ ತೀರಿಸಬೇಕು ಎಂಬುದಾಗಿ ಬ್ಯಾಂಕ್ ಗಳಾಗಲಿ, ಬ್ಯಾಂಕೇತರ ಹಣಕಾಸು ಕಂಪನಿಗಳಾಗಲಿ ಒತ್ತಾಯ ಮಾಡುವಂತಿಲ್ಲ ಎಂಬ ನಿಯಮಗಳು ಇವೆ.
ಇದನ್ನೂ ಓದಿ: ನೀವು ಆನ್‌ಲೈನ್ ವಂಚನೆಗೆ ಸಿಲುಕಿ ಹಣ ಕಳೆದುಕೊಳ್ಳಬಾರದಾ? ಮೊದಲು ಈ ಕೆಲಸ ಮಾಡಿ



















