ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಈಗ ರಾಷ್ಟ್ರ ರಾಜಧಾನಿಗೂ ಎಂಟ್ರಿ ಕೊಟ್ಟಿದೆ. ಕೆಎಂಎಫ್ ಈ ತಿಂಗಳಿನಿಂದ ಇಡ್ಲಿ ಮತ್ತು ದೋಸೆ ಹಿಟ್ಟು ಮತ್ತು ನವದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಲಿದೆ. ನ. 21ರಂದು ಈ ಮಳಿಗೆ ಉದ್ಘಾಟನೆಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 21ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಂದಿನಿ ಬ್ರಾಂಡ್‌ನ ಹಾಲು, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಹೊರ ರಾಜ್ಯದಲ್ಲೂ ಕರ್ನಾಟಕದ ಮಾರುಕಟ್ಟೆ ವಿಸ್ತರಣೆಯಾಗಿದ್ದು, ಹೆಮ್ಮೆಯ ಸಂಗತಿಯೇ ಸರಿ.
ಈಗಾಗಲೇ ಕೆಎಂಎಫ್ ನ ನಂದಿನಿ ಉತ್ಪನ್ನಗಳು ಮಹಾರಾಷ್ಟ್ರ, ಆಂಧ್ರ, ಗೋವಾ, ತೆಲಂಗಾಣ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ. ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಲಾಗುತ್ತಿದೆ. ಕೆಎಂಎಫ್ ಕಂಪು ಉತ್ತರ ಭಾರತದ ಕಡೆಗೆ ಹೆಜ್ಜೆ ಹಾಕುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.
ಇತ್ತೀಚೆಗೆ ಹಸುವಿನ ಹಾಲು ಪೂರೈಕೆ ಮಾಡಲು ಕೆಎಂಎಫ್‌ಗೆ ದೆಹಲಿ ಸರ್ಕಾರ ಬೇಡಿಕೆಯನ್ನು ಸಲ್ಲಿಕೆ ಮಾಡಿತ್ತು. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಕೆ ಮಾಡಲು ಕೆಎಂಎಫ್ ಮುಂದಾಗಿದೆ. ಕೆಎಂಎಫ್, ಮಂಡ್ಯ ಹಾಲು ಒಕ್ಕೂಟದ ಮೂಲಕ ದೆಹಲಿಗೆ ಪೂರೈಕೆ ಮಾಡಲಿದೆ. ಹೀಗಾಗಿ ಹಾಲು ಸಾಗಾಟ ಮಾಡಲು ಟೆಂಡರ್ ಕರೆಯಲಾಗಿದೆ. ಮಂಡ್ಯದಿಂದ ದೆಹಲಿಗೆ ರಸ್ತೆ ಮಾರ್ಗದ ಮೂಲಕ ಹಾಲು ಸಾಗಣೆ ಮಾಡಲು 54 ಗಂಟೆ ಬೇಕಾಗುತ್ತದೆ. ಈ ಕುರಿತು ಪ್ರಾಯೋಗಿಕ ಸಂಚಾರ ಕೂಡ ನಡೆದಿದೆ.