ಉಡುಪಿ/ಬೈಂದೂರು : ಕೆಲವು ತಿಂಗಳುಗಳಿಂದ ಬೈಂದೂರು ಬಿಜೆಪಿಯಲ್ಲಿದ್ದ ಭಿನ್ನಮತ ಕೊನೆಗೂ ಸ್ಪೋಟಗೊಂಡಿದೆ. ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನಡುವೆ ತಳ್ಳಾಟ ನಡೆದಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಲಿರುವ ದಿಶಾ ಸಭೆಗೆ ಹಾಜರಾಗಲು ಶಾಸಕರೊಂದಿಗೆ ಬಂದಿದ್ದ ವೇಳೆ, ಉಪಹಾರ ಸೇವನೆ ಹಾಗೂ ವಿಶ್ರಾಂತಿಗಾಗಿ ಮಣಿಪಾಲದ ಪ್ರಸಿದ್ದ ಖಾಸಗಿ ಹೊಟೇಲ್ ಒಂದಕ್ಕೆ ಆಗಮಿಸಿದ್ದರು. ಈ ವೇಳೆ ಬೈಂದೂರು ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಶಾಸಕರು ಸಂಸದರ ಗಮನಕ್ಕೆ ತರುತ್ತಿದ್ದ ವೇಳೆ ದೀಪಕ್ ಕುಮಾರ್ ಶೆಟ್ಟಿ ಆಕ್ಷೇಪಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ನಡೆದ ವಾಕ್ಸಮರ ತಾರಕಕ್ಕೇರಿ “ಹೊಯ್- ಕೈ” ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಸದ ಬಿವೈಆರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ದೀಪಕ್ ಕುಮಾರ್ ಶೆಟ್ಟಿ ಮಂಡಲ ಅಧ್ಯಕ್ಷಗಿರಿ ಹುದ್ದೆ ಕಳೆದುಕೊಂಡ ಬಳಿಕ ರೈತ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಬೈಂದೂರು ಪಟ್ಟಣ ಪಂಚಾಯತ್ ಗೆ ಗ್ರಾಮೀಣ ಪ್ರದೇಶಗಳನ್ನು ಸೇರ್ಪಡಿಸುವ ಅವೈಜ್ಞಾನಿಕ ನೀತಿಯ ವಿರುದ್ದ ರೈತ ಸಂಘದ ಮುಂದಾಳತ್ವದಲ್ಲಿ ಸಮಾನ ಮನಸ್ಕರೊಂದಿಗೆ ಬೈಂದೂರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದ ರೈತ ಪ್ರತಿಭಟನೆಗಳು ದೀಪಕ್ ಶೆಟ್ಟರಿಗೆ ಹೊಸ ವರ್ಚಸ್ಸು ತಂದುಕೊಟ್ಟಿತ್ತು.
ಮಂಗಳವಾರ ಸಂಸದರ ಭೇಟಿಯ ವೇಳೆ ಇದೇ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾಗಿದ್ದ ಶಾಸಕ ಗಂಟಿಹೊಳೆಯವರ ಮಾತಿಗೆ ದೀಪಕ್ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದರಿಂದ ಗಲಾಟೆ ಆರಂಭವಾಯಿತು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ. ಸ್ಥಳದಲ್ಲಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕುಂದಾಪುರ ಭಾಗದ ತಾ.ಪಂ ಮಾಜಿ ಸದಸ್ಯರೊಬ್ಬರ ಪ್ರಯತ್ನದಿಂದ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿದು ಬಂದಿದೆ.


















