ಕರ್ನೂಲ್ : ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ 15 ವರ್ಷದ ಮಗನನ್ನು ಪ್ರೇಮಿಯೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆಯೊಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ನಂತರ ಯಾರಿಗೂ ಅನುಮಾನ ಬಾರದಂತೆ ಶವವನ್ನು ಸ್ಮಶಾನದಲ್ಲಿ ಹೂತುಹಾಕಿ, ಮಗ ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ್ದ ತಾಯಿಯ ಅಸಲಿ ಮುಖವನ್ನು ವಿಶೇಷ ತನಿಖಾ ತಂಡ (SIT) ಬಯಲಿಗೆಳೆದಿದೆ.
ಕರ್ನೂಲ್ ಜಿಲ್ಲೆಯ ಅದೋನಿ ಮಂಡಲದ ಜಿ. ಹೊಸಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ದುರ್ದೈವಿ ಬಾಲಕನನ್ನು ವೀರೇಂದ್ರ (15) ಎಂದು ಗುರುತಿಸಲಾಗಿದೆ. ಈತನ ತಾಯಿ ಗಂಗಮ್ಮ ಎಂಬಾಕೆಗೆ ಅದೇ ಗ್ರಾಮದ ದರ್ಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು.
ತಾಯಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ಬಳಿಕ ಆಕೆಯ ನಡವಳಿಕೆಯನ್ನು ವೀರೇಂದ್ರ ಹಲವು ಬಾರಿ ಖಂಡಿಸಿದ್ದ. ಜೊತೆಗೆ ಈ ವಿಚಾರವನ್ನು ಸಂಬಂಧಿಕರು ಮತ್ತು ಗ್ರಾಮಸ್ಥರ ಮುಂದೆ ಬಹಿರಂಗಪಡಿಸಿದ್ದ. ಇದರಿಂದಾಗಿ ಮನೆಯಲ್ಲಿ ಪ್ರತಿದಿನ ಜಗಳಗಳು ನಡೆಯುತ್ತಿದ್ದವು. ತಮ್ಮ ಅಕ್ರಮ ಸಂಬಂಧ ಊರ ತುಂಬ ರಟ್ಟಾಗುವ ಭಯ ಮತ್ತು ತನ್ನ ಪ್ರೀತಿಗೆ ಮಗ ಅಡ್ಡಿಯಾಗುತ್ತಿದ್ದಾನೆ ಎಂಬ ಆಕ್ರೋಶದಿಂದ ಗಂಗಮ್ಮ ಹಾಗೂ ಆಕೆಯ ಪ್ರೇಮಿ ದರ್ಗಪ್ಪ ಇಬ್ಬರೂ ಸೇರಿ ವೀರೇಂದ್ರನನ್ನು ಹತ್ಯೆ ಮಾಡಿದ್ದಾರೆ. ಬಳಿಕ ಯಾರ ಕಣ್ಣಿಗೂ ಬೀಳದಂತೆ ಶವವನ್ನು ಗ್ರಾಮದ ಹೊರವಲಯದ ಸ್ಮಶಾನದಲ್ಲಿ ರಹಸ್ಯವಾಗಿ ಹೂತುಹಾಕಿ ವಾಪಸಾಗಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿ ನಾಟಕವಾಡಿದ ತಾಯಿ
ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ತಾಯಿ ಗಂಗಮ್ಮ ಅತ್ಯಂತ ಚಾಣಾಕ್ಷತನದಿಂದ ನಡೆದುಕೊಂಡಿದ್ದಳು. ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಆತನನ್ನು ಹುಡುಕುವ ನಾಟಕವಾಡಿದ್ದಳು. ಇಷ್ಟಕ್ಕೇ ನಿಲ್ಲದ ಆಕೆ, ಪೊಲೀಸರು ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತನ್ನ ಮಗನನ್ನು ಹುಡುಕಿಕೊಡುವಂತೆ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನೂ ಸಲ್ಲಿಸಿದ್ದಳು. ಹೈಕೋರ್ಟ್ ಮಧ್ಯಪ್ರವೇಶಿಸಿ ತನಿಖೆಯನ್ನು ಚುರುಕುಗೊಳಿಸುವಂತೆ ಆದೇಶಿಸಿದಾಗ, ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಯಿತು. ಆದರೆ, ಎಸ್‌ಐಟಿ ರಚನೆಯೇ ಆರೋಪಿಗಳ ಪಾಲಿಗೆ ಉರುಳಾಗಿ ಪರಿಣಮಿಸಿತು.
ತನಿಖೆಯಲ್ಲಿ ಸತ್ಯ ಬಯಲು
ವಿಶೇಷ ತನಿಖಾ ತಂಡವು ತಾಯಿ ಗಂಗಮ್ಮ ಮತ್ತು ಆಕೆಯ ಪ್ರೇಮಿ ದರ್ಗಪ್ಪ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅವರ ಹೇಳಿಕೆಗಳಲ್ಲಿ ತೀವ್ರ ವ್ಯತ್ಯಾಸಗಳು ಕಂಡುಬಂದವು. ಪೊಲೀಸರು ಇವರ ಮೊಬೈಲ್ ಕರೆಗಳ ದಾಖಲೆಗಳು (CDR), ತಾಂತ್ರಿಕ ಸಾಕ್ಷ್ಯಗಳು ಮತ್ತು ಸ್ಥಳೀಯ ಸಾಕ್ಷಿದಾರರ ಹೇಳಿಕೆಗಳನ್ನು ಪರಿಶೀಲಿಸಿದಾಗ ಇವರ ಮೇಲಿನ ಅನುಮಾನ ಬಲವಾಯಿತು.
ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ವಿಧಿಯಿಲ್ಲದೆ ಇಬ್ಬರೂ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೂನ್ 1ರಂದು ಕಂದಾಯ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡದ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ವೀರೇಂದ್ರನ ಶವವನ್ನು ಸ್ಮಶಾನದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ದರ್ಗಪ್ಪನನ್ನು ವಶಕ್ಕೆ ಪಡೆದಿದ್ದು, ತಾಯಿ ಗಂಗಮ್ಮಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಯ ಆರೋಗ್ಯ ವಿಚಾರಿಸಿದ ನಟ ಯಶ್!



















