ವಾಷಿಂಗ್ಟನ್: ಅಮೆರಿಕದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ತಮ್ಮ ಮಗನನ್ನೇ ಕೊಲೆ ಮಾಡಿದ ಪ್ರಕರಣ ಬಯಲಾಗಿದೆ. ಸರಿತಾ ರಾಮರಾಜು ಎಂಬ ಭಾರತ ಮೂಲದ ಮಹಿಳೆಯು ತಮ್ಮ 11 ವರ್ಷದ ಮಗನನ್ನು ಡಿಸ್ನಿಲ್ಯಾಂಡ್ ಗೆ ಪ್ರವಾಸಕ್ಕೆ ಕರೆದುಕೊಂಡಿದ್ದಾರೆ. ಅಲ್ಲಿ ಮಗನ ಕತ್ತು ಸೀಳಿ ಕೊಲೆ ಮಾಡಿದ ಬಳಿಕ ತಾವೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರಿತಾ ರಾಮರಾಜು ಅವರು ತಮ್ಮ ಪತಿಗೆ 2018ರಲ್ಲಿಯೇ ವಿಚ್ಛೇದನ ನೀಡಿದ್ದಾರೆ. 11 ವರ್ಷದ ಮಗನು ತಂದೆಯ ಜತೆಗೇ ಇರುತ್ತಾನೆ. ಕೆಲ ದಿನಗಳ ಹಿಂದೆ ತಂದೆಯ ಕಸ್ಟಡಿಯಲ್ಲಿರುವ ಮಗನನ್ನು ನೋಡಲು ಸರಿತಾ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ. ಮಗನ ಜತೆ ಮೂರು ದಿನ ಪ್ರವಾಸ ಕೈಗೊಳ್ಳುತ್ತೇನೆ ಎಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ.
ಸರಿತಾ ರಾಮರಾಜು ಅವರು ಡಿಸ್ನಿಲ್ಯಾಂಡ್ ಗೆ ಮೂರು ದಿನಗಳ ಪಾಸ್ ಖರೀದಿಸಿದ್ದಾರೆ. ಮಗನು ಕೂಡ ಖುಷಿಯಿಂದ ತಾಯಿ ಜತೆ ಪ್ರವಾಸಕ್ಕೆ ತೆರಳಿದ್ದಾನೆ. ಸ್ಯಾಂಟಾ ಅನಾ ಎಂಬ ನಗರದ ಹೋಟೆಲ್ ನಲ್ಲಿ ಇಬ್ಬರೂ ತಂಗಿದ್ದಾರೆ. ಆದರೆ, ಪ್ರವಾಸದ ವೇಳೆಯೇ ಚಾಕು ಇರಿಸಿಕೊಂಡಿದ್ದ ಇವರು, ಮಗನ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ತಾವೂ ಮಾತ್ರೆ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 19ರಂದು ಪ್ರವಾಸ ಮುಗಿಸಿ ಮಹಿಳೆಯು ಮಗನನ್ನು ತಂದೆ ಬಳಿ ಬಿಡಬೇಕಿತ್ತು. ಆದರೆ, ಇಷ್ಟೊತ್ತಿಗಾಗಲೇ ಮಹಿಳೆಯು ಮಗನನ್ನು ಕೊಲೆ ಮಾಡಿದ್ದಳು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಕೊಲೆ ಮಾಡಿದ ಬಳಿಕ ಮಹಿಳೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಆದಾಗ್ಯೂ, ಮಗನನ್ನೇ ಕೊಲೆ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮಹಿಳೆ ವಿರುದ್ಧದ ಆರೋಪ ಸಾಬೀತಾದರೆ, 25 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.