ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಶೆಡ್ ಗ್ರಾಮದಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರು ಡೆತ್‌ನೋಟ್ ಬರೆದು ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಗ್ರಾಮದ ರಾಮಚಂದ್ರ ಎಂಬುವರ ಪುತ್ರಿಯರಾದ ಸುಜಾತ (16) ಹಾಗೂ ರುಕ್ಮಿಣಿ (14) ಕಾಣೆಯಾಗಿರುವ ಬಾಲಕಿಯರು ಎಂದು ತಿಳಿದುಬಂದಿದೆ.
ತಾಯಿ ಬೈದಿದ್ದಕ್ಕೆ ಮನನೊಂದು ಇಬ್ಬರು ಸಹೋದರಿಯರು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮನೆದಲ್ಲಿ ಬರೆದಿಟ್ಟು ಹೋಗಿರುವ ಪತ್ರದಲ್ಲಿ “ಅಮ್ಮ-ಅಪ್ಪ ಸ್ವಾರಿ… ನಿಮ್ಮ ಕಣ್ಣು ಮುಂದೆ ಸಾಯೋಕೆ ಆಗಲ್ಲ… ನಾವು ದೂರ ಹೋಗಿ ಸತ್ತಿದ್ದೇವೆ… ಸ್ವಾರಿ” ಎಂದು ಉಲ್ಲೇಖಿಸಲಾಗಿದೆ. ಈ ಡೆತ್‌ನೋಟ್ ಕಂಡ ಕುಟುಂಬದವರು ಬೆಚ್ಚಿಬಿದ್ದಿದ್ದಾರೆ.
ಬಾಲಕಿಯರು ಮನೆಯಿಂದ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ತಂದೆ ರಾಮಚಂದ್ರ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡೆತ್‌ನೋಟ್ ಆಧರಿಸಿ ಬಾಲಕಿಯರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ಕುರಿತು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಅಪ್ರಾಪ್ತ ಬಾಲಕಿಯರ ಸುರಕ್ಷಿತ ಪತ್ತೆಗೆ ಕುಟುಂಬದವರು ಹಾಗೂ ಗ್ರಾಮಸ್ಥರು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ : ಜಿಬಿಎ ಚುನಾವಣೆ ಭವಿಷ್ಯಕ್ಕೆ ನಾಳೆ ಸುಪ್ರೀಂ ಕೋರ್ಟ್ ತೀರ್ಮಾನ ನಿರ್ಣಾಯಕ!


















