ಬೆಂಗಳೂರು : ಪ್ರತಿಭೆಗಳ ಗಣಿ ಎಂದೇ ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಈ ಬಾರಿ ಕನ್ನಡಿಗರಿಗೆ ಮತ್ತೊಬ್ಬ ಯುವ ತಾರೆಯನ್ನು ಪರಿಚಯಿಸಿದೆ. ಭಾನುವಾರ ನಡೆದ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ಕರ್ನಾಟಕದ 19 ವರ್ಷದ ಲೆಗ್ ಸ್ಪಿನ್ನರ್ ಯಶ್ ರಾಜ್ ಪೂಂಜಾ (Yash Raj Punja) ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಪರ ಪದಾರ್ಪಣೆ ಮಾಡಿದ ಪೂಂಜಾ, ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ತಮ್ಮ ಕೋಟಾದ 4 ಓವರ್‌ಗಳಲ್ಲಿ ಕೇವಲ 25 ರನ್ ನೀಡಿದ ಅವರು, ರಮಣದೀಪ್ ಸಿಂಗ್ ಅವರ ಮಹತ್ವದ ವಿಕೆಟ್ ಪಡೆದರು. ಇವರ ಬೌಲಿಂಗ್ ವೇಗ ಮತ್ತು ನಿಖರತೆ ಕ್ರಿಕೆಟ್ ವಿಶ್ಲೇಷಕರ ಪ್ರಶಂಸೆಗೆ ಪಾತ್ರವಾಗಿದೆ.
ಕರಾವಳಿ ಮೂಲದ ಪ್ರತಿಭೆ – ಅಬುಧಾಬಿಯಲ್ಲಿ ಜನನ
ಮೂಲತಃ ಕರಾವಳಿ ಕರ್ನಾಟಕದ ಮಂಗಳೂರಿನವರಾದ ಯಶ್ ರಾಜ್ ಪೂಂಜಾ, ಜೂನ್ 26, 2006 ರಂದು ಅಬುಧಾಬಿಯಲ್ಲಿ ಜನಿಸಿದರು. ಇವರು ಧೀರಜ್ ಮತ್ತು ಶಿಲ್ಪಾ ಪೂಂಜಾ ದಂಪತಿಯ ಪುತ್ರ. ವಿಶೇಷವೆಂದರೆ, ಇವರ ಅಣ್ಣ ಯೋಧಿನ್ ಪೂಂಜಾ ಅವರು ಯುಎಇ (UAE) ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
ವೇಗಿ ಟು ಸ್ಪಿನ್ನರ್: ಅಣ್ಣನ ಸಲಹೆಯೇ ಬದಲಾವಣೆ
ಆರಂಭದಲ್ಲಿ ಅಬುಧಾಬಿಯ ಜಾಯೆದ್ ಕ್ರಿಕೆಟ್ ಅಕಾಡೆಮಿಯಲ್ಲಿ ವೇಗದ ಬೌಲರ್ ಆಗಿ ತರಬೇತಿ ಆರಂಭಿಸಿದ್ದ ಯಶ್, ತಮ್ಮ ಅಣ್ಣ ಯೋಧಿನ್ ಅವರ ಸಲಹೆಯಂತೆ ಲೆಗ್-ಸ್ಪಿನ್ ಬೌಲಿಂಗ್‌ಗೆ ಬದಲಾದರು. 2023ರಲ್ಲಿ ಶಾಲಾ ಶಿಕ್ಷಣ ಮುಗಿಸಿದ ಇವರು, ಬೆಂಗಳೂರಿಗೆ ಬಂದು ರಾಹುಲ್ ದ್ರಾವಿಡ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದು ತಮ್ಮ ಕೌಶಲ್ಯವನ್ನು ಮತ್ತಷ್ಟು ಹರಿತಗೊಳಿಸಿಕೊಂಡರು. 2024ರಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಇಯಾನ್ ಬಿಷಪ್ ಅವರು ಯಶ್ ಅವರ ಬೌಲಿಂಗ್ ಕಂಡು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಹಾರಾಜ ಟ್ರೋಫಿಯಲ್ಲಿ ಅಬ್ಬರ
ಯಶ್ ರಾಜ್ ಪೂಂಜಾ ಅವರು ಬೆಳಕಿಗೆ ಬಂದಿದ್ದು 2025ರ ಮಹಾರಾಜ ಟ್ರೋಫಿ (KSCA) ಮೂಲಕ. ಹುಬ್ಬಳ್ಳಿ ಟೈಗರ್ಸ್ ಪರ ಆಡಿದ್ದ ಅವರು, ಟೂರ್ನಿಯಲ್ಲಿ ಕೇವಲ 10 ಪಂದ್ಯಗಳಲ್ಲಿ 12.48ರ ಸರಾಸರಿಯಲ್ಲಿ ಬರೋಬ್ಬರಿ 23 ವಿಕೆಟ್ ಕಬಳಿಸಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಈ ಅಮೋಘ ಸಾಧನೆಯೇ ಅವರನ್ನು ಐಪಿಎಲ್ ಹರಾಜಿನತ್ತ ಕೊಂಡೊಯ್ದಿತು. 2026ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಇವರನ್ನು ₹30 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು.
ಯಶ್ ರಾಜ್ ಪೂಂಜಾ ಅವರ ವಿಶೇಷತೆಗಳು:
- ಬೌಲಿಂಗ್ ಶೈಲಿ : ಲೆಗ್-ಸ್ಪಿನ್ ಜೊತೆಗೆ ಪರಿಣಾಮಕಾರಿ ಗೂಗ್ಲಿ ಎಸೆಯುವ ಕಲೆ.
- ಹೆಚ್ಚುವರಿ ಬೌನ್ಸ್ : ಎತ್ತರದ ನಿಲುವಿನಿಂದಾಗಿ ಇವರ ಎಸೆತಗಳು ಹೆಚ್ಚಿನ ಬೌನ್ಸ್ ಪಡೆಯುತ್ತವೆ.
- ಅನುಭವ : ಮಹಾರಾಜ ಟ್ರೋಫಿ, ಅಬುಧಾಬಿ ದೇಶೀಯ ತಂಡಗಳು ಹಾಗೂ ನೆಟ್ ಬೌಲರ್ ಆಗಿ ಐಪಿಎಲ್ ತಂಡಗಳಿಗೆ ತರಬೇತಿ ನೀಡಿದ ಅನುಭವ. ಕರ್ನಾಟಕದ ಮತ್ತೊಬ್ಬ ಪ್ರತಿಭೆ ಐಪಿಎಲ್ ವೇದಿಕೆಯಲ್ಲಿ ಅಬ್ಬರಿಸುತ್ತಿರುವುದು ರಾಜ್ಯದ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ : ಚಲಿಸುತ್ತಿದ್ದ ಬೈಕ್‌ನ ಟಯರ್ ಬ್ಲಾಸ್ಟ್ – ವಿದ್ಯಾರ್ಥಿನಿ ಸಾವು, ಮೂವರಿಗೆ ಗಂಭೀರ ಗಾಯ!



















