ವಿಜಯನಗರ : ಪಟ್ಟಣದಲ್ಲಿ ರಾತ್ರೋರಾತ್ರಿ ಮುಸುಕುಧಾರಿಗಳ ಓಡಾಟ ಕಂಡುಬಂದಿದ್ದು, ಕಳ್ಳತನದ ಸಂಚು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ನಿವಾಸಗಳ ಸುತ್ತಮುತ್ತ ಈ ಘಟನೆ ನಡೆದಿದ್ದು, ರಾತ್ರಿ ವೇಳೆ ಕೆಲವು ಮುಸುಕುಧಾರಿಗಳು ಅನುಮಾನಾಸ್ಪದವಾಗಿ ಓಡಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಮಾಸ್ಕ್ ಧರಿಸಿ, ಕೈಗವಸುಗಳನ್ನು ಹಾಕಿಕೊಂಡಿದ್ದ ಖದೀಮರು ಮನೆಗಳ ಸುತ್ತಮುತ್ತ ಪರಿಶೀಲನೆ ನಡೆಸಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಆದರೆ ಆ ಪ್ರದೇಶದಲ್ಲಿ ಬೀಗ ಹಾಕಿರುವ ಮನೆಗಳು ಕಂಡುಬರದ ಕಾರಣ ಯಾವುದೇ ಕೃತ್ಯ ಎಸಗದೆ ಅಲ್ಲಿಂದ ತೆರಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಕಳೆದ ವರ್ಷ ಕೂಡ್ಲಿಗಿ ಪಟ್ಟಣದಲ್ಲಿ ಸರಣಿ ಮನೆಗಳ್ಳತನ ಪ್ರಕರಣಗಳು ನಡೆದಿದ್ದ ಹಿನ್ನೆಲೆ, ಮತ್ತೆ ಇಂತಹ ಘಟನೆಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಘಟನೆ ನಡೆಯುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಂಡು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ : ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ; ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ


















