ವಡೋದರ: ಶುಕ್ರವಾರ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ (WPL 2025) ಉದ್ಘಾಟನ ಪಂದ್ಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ, ಗುಜರಾತ್ ಜೈಂಟ್ಸ್(GGTW vs RCBW) ವಿರುದ್ಧ 6 ವಿಕೆಟ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಇದರ ಜತೆಗೆ ಬೆಂಗಳೂರು ಮೂಲದ ಹಲವು ದಾಖಲೆಯನ್ನು ನಿರ್ಮಿಸಿದೆ. ಗುಜರಾತ್ ನೀಡಿದ 201 ರನ್‌ಗಳ ಗುರಿ ಮಿರಿದ ಆರ್‌ಸಿಬಿ ಟೂರ್ನಿಯಲ್ಲಿ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆಯಿತು.
ಈ ಮೊದಲು ಮುಂಬೈ ಇಂಡಿಯನ್ಸ್ ಈ ದಾಖಲೆ ಮಾಡಿತ್ತು. ಕಳೆದ ವರ್ಷ ನಡೆದಿದ್ದ ಟೂರ್ನಿಯಲ್ಲಿ ಮುಂಬೈ ತಂಡ ಗುಜರಾತ್ ವಿರುದ್ಧವೇ 191 ರನ್ ಬಾರಿಸಿ ಈ ದಾಖಲೆ ನಿರ್ಮಿಸಿತ್ತು. ಅಂದ ಹಾಗೆ ಎರಡು ಬಾರಿಯೂ ದಂಡನೆಗೆ ಒಳಗಾಗಿದ್ದು ಗುಜರಾತ್. ಇದು ಒಟ್ಟು ಗರಿಷ್ಠ ರನ್ ದಾಖಲಾದ ಪಂದ್ಯ ಎನಿಸಿಕೊಂಡಿತು. ಉಭಯ ತಂಡಗಳು ಸೇರಿ 403 ರನ್ ಪೇರಿಸಿತ್ತು. 2023ರ ಉದ್ಘಾಟನ ಆವೃತ್ತಿಯ, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಮತ್ತು ಗುಜರಾತ್ ತಂಡಗಳೇ 391 ರನ್ ಬಾರಿಸಿ ದಾಖಲೆ ನಿರ್ಮಿಸಿತ್ತು. ಆ ದಾಖಲೆ ಅದೇ ತಂಡಗಳು ಮುರಿದಿವೆ.
ಸಿಕ್ಸರ್ಗಳ ದಾಖಲೆ
ಈ ಪಂದ್ಯದಲ್ಲಿ ಒಟ್ಟು 16 ಸಿಕ್ಸರ್ಗಳನ್ನು ಬ್ಯಾಟರ್ಗಳು ಸಿಡಿದ್ದಾರೆ. ಇದು ಟೂರ್ನಿಯ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ದಾಖಲಾದ 2ನೇ ಗರಿಷ್ಠ ಬಸಿಕ್ಸರ್‌ಗಳು . ದಾಖಲೆ ಮುಂಬೈ ಮತ್ತು ಡೆಲ್ಲಿ ಪಂದ್ಯದ ಹೆಸರಿನಲ್ಲಿದೆ. 2024 ರ ಆವೃತ್ತಿಯಲ್ಲಿ ಇತ್ತಂಡಗಳ ನಡುವಣ ಪಂದ್ಯದಲ್ಲಿ 19 ಸಿಕ್ಸರ್ ಸಿಡಿದಿತ್ತು.
ಕೋಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಗುಜರಾತ್ ಜೈಂಟ್ಸ್, ಬೆಥ್ ಮೂನಿ (56 ರನ್, 42 ಎಸೆತ, 8 ಬೌಂಡರಿ), ನಾಯಕಿ ಆಶ್ಲೇ ಗಾರ್ಡ್ನರ್ (79* ರನ್, 37 ಎಸೆತ, 3 ಬೌಂಡರಿ, 8 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ಗೆ 201 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ 18.3 ಓವರ್ಗಳಲ್ಲಿ 4 ವಿಕೆಟ್ಗೆ 202 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಆರ್‌ಸಿಬಿ ಪರ ಎಲ್ಲಿಸ್ ಪೆರ್ರಿ (57 ರನ್, 34 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ರಿಚಾ ಘೋಷ್ (64ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್) ಸ್ಫೋಟಕ ಅರ್ಧಶತಕ ಬಾರಿಸಿ ಮಿಂಚಿದರು. ರಿಚಾ ಘೋಷ್ ಮತ್ತು ಕನಿಕಾ ಅಹುಜಾ (30ರನ್, 13 ಎಸೆತ, 4 ಬೌಂಡರಿ) ಮುರಿಯದ 5ನೇ ವಿಕೆಟ್ಗೆ 37 ಎಸೆತಗಳಲ್ಲೇ 93 ರನ್ ಕಸಿಯುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.