ಬೆಂಗಳೂರು : ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಭರವಸೆಯ ಹೊಸ ಸ್ಪಿನ್ ತಾರೆಯೊಬ್ಬರ ಉದಯವಾಗಿದೆ. ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ 25 ವರ್ಷದ ಯುವ ಸ್ಪಿನ್ನರ್ ಮಾನವ್ ಸುತಾರ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರು ಮಾನವ್ ಸುತಾರ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರನ್ನು ರವೀಂದ್ರ ಜಡೇಜಾ ಅವರ ಯೋಗ್ಯ ಉತ್ತರಾಧಿಕಾರಿ ಹಾಗೂ ಅವರ “ಅಪ್‌ಗ್ರೇಡೆಡ್ ವರ್ಷನ್” (ಮೇಲ್ದರ್ಜೆಗೇರಿದ ಆವೃತ್ತಿ) ಎಂದು ಬಣ್ಣಿಸಿದ್ದಾರೆ.
ರವೀಂದ್ರ ಜಡೇಜಾಗೆ ಯೋಗ್ಯ ಉತ್ತರಾಧಿಕಾರಿ
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಅವರ ನಿವೃತ್ತಿಯ ಬಳಿಕ ತಂಡದಲ್ಲಿ ಆ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಮಾನವ್ ಸುತಾರ್ ಮೂಲಕ ಉತ್ತಮ ಉತ್ತರ ಸಿಕ್ಕಂತಿದೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಭವಿಷ್ಯದಲ್ಲಿ ಜಡೇಜಾ ಅವರ ಸ್ಥಾನಕ್ಕೆ ಸುತಾರ್ ಸೂಕ್ತ ಆಯ್ಕೆ ಎಂದಿದ್ದಾರೆ. ಜಡೇಜಾ ಅವರಂತೆ ಸುತಾರ್ ಕೂಡ ಎಡಗೈ ಸ್ಪಿನ್ನರ್ ಆಗಿದ್ದು, ಕರಾರುವಕ್ಕಾದ ದಾಳಿ ಸಂಘಟಿಸಬಲ್ಲರು. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಧಾರವಾಗಬಲ್ಲ ಸಾಮರ್ಥ್ಯ ಹೊಂದಿರುವ ಕಾರಣ ಇವರನ್ನು ಜಡೇಜಾ ಅವರ ಅತ್ಯುತ್ತಮ ಬದಲಿ ಆಟಗಾರ ಎಂದು ಚೋಪ್ರಾ ವಿಶ್ಲೇಷಿಸಿದ್ದಾರೆ.
ಗಾಲೆಯಲ್ಲಿ ಮಿಂಚಿದ ಸ್ಪಿನ್ ಮೋಡಿ
ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮಾನವ್ ಸುತಾರ್ ತಮ್ಮ ಸ್ಪಿನ್ ಮೋಡಿ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಚಾಕಚಕ್ಯತೆಯ ಬೌಲಿಂಗ್ ಮೂಲಕ ಕೇವಲ 76 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾ ತಂಡವನ್ನು ಕಾಡಿದರು. ಇನ್ನಿಂಗ್ಸ್‌ನ ತಮ್ಮ ಮೊದಲ ಎಸೆತದಲ್ಲೇ ದಿನೇಶ್ ಚಾಂದಿಮಾಲ್ ಅವರನ್ನು ಪೆವಿಲಿಯನ್‌ಗಟ್ಟಿದ ಸುತಾರ್, ಬಳಿಕ ಲಹಿರು ಉದಾರ ಅವರಂತಹ ಪ್ರಮುಖ ವಿಕೆಟ್ ಪಡೆದು ಲಂಕಾ ಪಡೆಯನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದರು.
ಪ್ಲೈಟ್, ಡಿಪ್ ಹಾಗೂ ಬೌನ್ಸ್ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ ಸುತಾರ್ ಅವರ ಈ ಅಮೋಘ ದಾಳಿಯ ನೆರವಿನಿಂದ ಭಾರತ ತಂಡವು ಶ್ರೀಲಂಕಾವನ್ನು ೨೮೪ ರನ್‌ಗಳಿಗೆ ಆಲೌಟ್ ಮಾಡಿತು. ಇದರಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ೧೭೮ ರನ್‌ಗಳ ಬೃಹತ್ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಕೂಡ ವಿಕೆಟ್ ಪಡೆದು ಯುವ ಸ್ಪಿನ್ನರ್‌ಗೆ ಸಾಥ್ ನೀಡಿದರು.
ಬೌಲಿಂಗ್‌ನಲ್ಲಿ ‘ಅಪ್‌ಗ್ರೇಡೆಡ್ ವರ್ಷನ್’
ಮಾನವ್ ಸುತಾರ್ ಅವರ ಬೌಲಿಂಗ್ ಶೈಲಿಯನ್ನು ಆಕಾಶ್ ಚೋಪ್ರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸುತಾರ್ ಬೌಲಿಂಗ್ ಮಾಡುವಾಗ ಚೆಂಡು ಅತ್ಯುತ್ತಮವಾಗಿ ಡ್ರಿಫ್ಟ್ ಆಗುತ್ತದೆ, ಬೌನ್ಸ್ ಪಡೆಯುತ್ತದೆ ಹಾಗೂ ಹೆಚ್ಚು ತಿರುವು ಪಡೆಯುತ್ತದೆ. ರಕ್ಷಣಾತ್ಮಕ ಆಟವಾಡಲು ಯತ್ನಿಸುವ ಬ್ಯಾಟರ್‌ಗಳನ್ನು ಅಚ್ಚರಿಯ ರೀತಿಯಲ್ಲಿ ಔಟ್ ಮಾಡುವ ಚಾಕಚಕ್ಯತೆ ಅವರಲ್ಲಿದೆ. ಬ್ಯಾಟರ್‌ಗಳು ಡಿಫೆಂಡ್ ಮಾಡುವಾಗಲೇ ಮಣ್ಣು ಮುಕ್ಕುವಂತೆ ಮಾಡುವ ಸಾಮರ್ಥ್ಯ ಈ ಯುವ ಆಟಗಾರನಲ್ಲಿದೆ. ಇದೇ ಕಾರಣಕ್ಕಾಗಿ ಅವರನ್ನು ಕೇವಲ ಬೌಲರ್ ಆಗಿ ನೋಡಿದಾಗ, ಜಡೇಜಾ ಅವರ ಅಪ್‌ಗ್ರೇಡೆಡ್ ವರ್ಷನ್ ಎಂದು ಕರೆಯಬಹುದು ಎಂದು ಚೋಪ್ರಾ ತಮ್ಮ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ.
ವಿದೇಶಿ ಪಿಚ್‌ಗಳಲ್ಲೂ ಯಶಸ್ವಿಯಾಗುವ ವಿಶ್ವಾಸ
ಏಷ್ಯಾ ಖಂಡದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಮಾತ್ರವಲ್ಲದೆ, ಭವಿಷ್ಯದಲ್ಲಿ ವಿದೇಶಿ ನೆಲದ ಸವಾಲಿನ ಪಿಚ್‌ಗಳಲ್ಲೂ ಸುತಾರ್ ಯಶಸ್ವಿಯಾಗಬಲ್ಲರು ಎಂಬ ವಿಶ್ವಾಸವನ್ನು ಚೋಪ್ರಾ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಶ್ರೀಗಂಗಾನಗರದಂತಹ ಕ್ರಿಕೆಟ್ ಸೌಲಭ್ಯಗಳಿಲ್ಲದ ಹಿನ್ನೆಲೆಯಿಂದ ಬಂದಿರುವ ಸುತಾರ್, ದೇಶೀಯ ಕ್ರಿಕೆಟ್, ದುಲೀಪ್ ಟ್ರೋಫಿ ಹಾಗೂ ಇಂಡಿಯಾ ಎ ತಂಡದಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲೇ ಎರಡು ಇನ್ನಿಂಗ್ಸ್‌ಗಳಿಂದ 7 ವಿಕೆಟ್ ಪಡೆದು ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದಿದ್ದಲ್ಲದೆ, ಬ್ಯಾಟಿಂಗ್‌ನಲ್ಲಿ 28 ರನ್ ಗಳಿಸಿ ತಮ್ಮ ಆಲ್‌ರೌಂಡರ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, ತಮ್ಮ ಸ್ಥಿರ ಪ್ರದರ್ಶನದ ಮೂಲಕ ಮುಂದಿನ ದಿನಗಳಲ್ಲಿ ಭಾರತ ತಂಡದ ನಂಬಿಗಸ್ತ ಆಟಗಾರನಾಗಿ ಹೊರಹೊಮ್ಮುವ ಎಲ್ಲಾ ಭರವಸೆಯನ್ನು ಮೂಡಿಸಿದ್ದಾರೆ.
ಇದನ್ನೂ ಓದಿ : ಆಸ್ಟ್ರೇಲಿಯಾ ತಂಡದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ವೆದರಾಲ್ಡ್ ಔಟ್.. 3 ವರ್ಷಗಳ ಬಳಿಕ ರೆನ್‌ಶಾಗೆ ಮಣೆ



















