ಬೆಂಗಳೂರು | ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 7ರಿಂದ 13ರವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗಗಳು ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಎಂಬ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ನೊಂದ ಮಹಿಳೆಯರಿಂದ ಸ್ಥಳದಲ್ಲೇ ದೂರುಗಳನ್ನು ಸ್ವೀಕರಿಸಿ, ನೇರವಾಗಿ ಆಲಿಸಿ, ತ್ವರಿತ ಪರಿಹಾರ ಒದಗಿಸಲಾಗುತ್ತದೆ.
ಮಹಿಳೆಯರ ಸುರಕ್ಷತೆ, ಘನತೆ ಹಾಗೂ ನ್ಯಾಯದ ಲಭ್ಯತೆಯ ಕಡೆಗಿನ ಸಾಮೂಹಿಕ ಬದ್ಧತೆಯನ್ನು ಬಲಪಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ವಾರಗಳ ಕಾಲ ನಡೆಯುವ ಈ ರಾಷ್ಟ್ರವ್ಯಾಪಿ ಸಾರ್ವಜನಿಕ ಅಹವಾಲು ಆಲಿಕೆ ಸಂದರ್ಭದಲ್ಲಿ ಮಹಿಳೆಯರಿಗೆ ತಮ್ಮ ಸಮಸ್ಯೆಗಳನ್ನು, ಕುಂದು-ಕೊರತೆಗಳನ್ನು ನೇರವಾಗಿ ಹೇಳಲು ಮತ್ತು ಸಾಂಸ್ಥಿಕ ಬೆಂಬಲವನ್ನು ಪಡೆಯಲು ಮುಕ್ತ ವೇದಿಕೆ ಕಲ್ಪಿಸುವ ಗುರಿಯನ್ನು ಮಹಿಳಾ ಆಯೋಗ ಹೊಂದಿದೆ.
ಈ ಅಭಿಯಾನದ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆ, ಕೆಲಸದ ಸ್ಥಳದಲ್ಲಿ ಕಿರುಕುಳ, ಮಾತೃತ್ವ ಸೌಲಭ್ಯಗಳ ವಂಚನೆ, ಪರಿತ್ಯಾಗ, ಮಾನವ ಸಾಗಾಣಿಕೆ ಮತ್ತು ಇತರ ಲಿಂಗಾಧಾರಿತ ಪರಿಹರಿಸಲಾಗುತ್ತದೆ. ಜೊತೆಗೆ ಅನ್ಯಾಯಗಳಿಗೆ ಸಂಬಂಧಿಸಿದ ದೂರುಗಳಿಗೆ ಸ್ಥಳದಲ್ಲೇ ತ್ವರಿತ ಪರಿಹಾರ ನೀಡಲಾಗುವುದೆಂದು ಮಹಿಳಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅಭಿಯಾನದ ಸಂದರ್ಭದಲ್ಲಿ ರಾಜ್ಯ ಮಹಿಳಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ವಿಶೇಷ ಪೀಠ, ಸ್ಥಳೀಯ ಆಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಾನೂನು ತಜ್ಞರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ. ಇನ್ನು, ‘ಮಹಾ ಜನ್ ಸುನ್ವಾಯಿ’ ಅಭಿಯಾನದಲ್ಲಿ ಮೊದಲೇ ಮಾಹಿತಿ ನೀಡದೇ, ನೇರವಾಗಿ ಬರುವ ದೂರುಗಳನ್ನು ಕೂಡ ವಿಚಾರಣೆ ನಡೆಸಲಾಗುತ್ತದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ (ಮಾರ್ಚ್ 8) ಅಂಗವಾಗಿ ಆಯೋಜಿಸಲಾದ ಈ ‘ಮಹಾ ಜನ್ ಸುನ್ವಾಯಿ’ ಅಭಿಯಾನವು ಸಾಂಕೇತಿಕ ಆಚರಣೆಗಿಂತ ಹೆಚ್ಚಾಗಿ ಮಹಿಳೆಯರಿಗೆ ನೈಜ ನ್ಯಾಯ ಒದಗಿಸುವ ಮತ್ತು ಸಬಲೀಕರಣದತ್ತ ಸಾಗುವ ನಿಟ್ಟಿನಲ್ಲಿ ಮಹತ್ವ ಹೆಜ್ಜೆಯಾಗಿದೆ. ಭಾರತದಾದ್ಯಂತ ಮಹಿಳೆಯರ ಸುರಕ್ಷಿತ ಮತ್ತು ಸ್ಪಂದನಾಶೀಲ ವ್ಯವಸ್ಥೆಯನ್ನು ನಿರ್ಮಿಸುವ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗಗಳ ಸಂಕಲ್ಪವನ್ನು ಈ ಅಭಿಯಾನವು ಎತ್ತಿ ಹಿಡಿಯಲಿದೆ.
ಕರ್ನಾಟಕದಲ್ಲಿ ಎಲ್ಲಿ ಮತ್ತು ಯಾವಾಗ ನಡೆಯಲಿದೆ ‘ಮಹಾ ಜನ್ ಸುನ್ವಾಯಿ’ ಕಾರ್ಯಕ್ರಮ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 07-03-2026ರಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೆಯೇ 12-03-2026ರಂದು ತುಮಕೂರು ಜಿಲ್ಲೆಯ ಎಂ.ಜಿ. ರಸ್ತೆಯಲ್ಲಿರುವ ಬಾಲಭವನದಲ್ಲಿ, ಜೊತೆಗೆ 13-03-2026ರಂದು ಜಿಲ್ಲಾ ಪಂಚಾಯತ್ ಮೈಸೂರಿನಲ್ಲಿ ಅಭಿಯಾನ ನಡೆಯಲಿದೆ.
ಇದನ್ನೂ ಓದಿ : HDFC ಬ್ಯಾಂಕ್ ಗ್ರಾಹಕರೇ ಗಮನಿಸಿ.. ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿದರೆ ಇನ್ನು ಹೆಚ್ಚುವರಿ ಶುಲ್ಕ!


















