ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ 16 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಮದರಸಾ ಶಿಕ್ಷಕನೊಬ್ಬನಿಗೆ ನ್ಯಾಯಾಲಯವು ಒಟ್ಟು 187 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮೊಹಮ್ಮದ್ ರಫಿ ಎಂಬ ದುರುಳನಿಗೆ ತಾಲಿಪರಂಬಾ ಎಂಬ ಕ್ಷಿಪ್ರಗತಿಯ ವಿಚಾರಣಾ ನ್ಯಾಯಾಲಯವು ಹಲವು ಸೆಕ್ಷನ್ ಗಳ ಅಡಿಯಲ್ಲಿ 187 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅಂದರೆ, 2020ರ ಮಾರ್ಚ್ ನಿಂದ ಎರಡು ವರ್ಷಗಳವರೆಗೆ ಮೊಹಮ್ಮದ್ ರಫಿಯು ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲಕೋಡ್ ಗ್ರಾಮದ ನಿವಾಸಿಯಾಗಿರುವ ಈತನು ತನ್ನೂರಿನ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವೀಗ ಹಲವು ಸೆಕ್ಷನ್ ಗಳ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಜತೆಗೆ 9 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯ್ದೆ (ಪೋಕ್ಸೋ)ಯ ಸೆಕ್ಷನ್ 5 (ಟಿ) ಅಡಿಯಲ್ಲಿ ಅಪರಾಧಿ ಮೊಹಮ್ಮದ್ ರಫಿಗೆ 50 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೇ ಕಾಯ್ದೆಯ ಸೆಕ್ಷನ್ 5(1) ಮತ್ತು 5(ಎಫ್) ಅಡಿಯಲ್ಲಿತಲಾ 35 ವರ್ಷ ಹಾಗೂ ಐಪಿಸಿ ಸೆಕ್ಷನ್ 376 (3) ಅಡಿಯಲ್ಲಿ25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಬಾಲಕಿಯ ವರ್ತನೆಯಲ್ಲಿ ವ್ಯತ್ಯಾಸವಾಗುತ್ತಿರುವುದನ್ನು ಕಂಡಿದ್ದ ಪೋಷಕರು ಆಕೆಯನ್ನು ಕೌನ್ಸೆಲಿಂಗ್ ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಬಾಲಕಿಯು ಮೊಹಮ್ಮದ್ ರಫಿಯ ಕೃತ್ಯದ ಬಗ್ಗೆ ತಿಳಿಸಿದ್ದಾಳೆ ಎನ್ನಲಾಗಿದೆ. ಇದಾದ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೂ ಮುನ್ನ ಕೂಡ ಮೊಹಮ್ಮದ್ ರಫಿಯು ಮತ್ತೊಬ್ಬ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೈಲು ಸೇರಿದ್ದ. ಪೆರೋಲ್ ಮೇಲೆ ಬಂದಿದ್ದ ದುರುಳನು ಮತ್ತೊಬ್ಬ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ. ಈಗ ನ್ಯಾಯಾಲಯವು ತಕ್ಕ ಶಾಸ್ತಿ ಮಾಡಿದೆ.



















