ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಬೆಳೆ ಹಾನಿ ಪರಿಶೀಲನೆಗೆ ಭೇಟಿ ನೀಡಿದ್ದ ವೇಳೆ, ರತ್ಲಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್ಪಿ) ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇತ್ತೀಚಿನ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಲು ಕಾರಿಯಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಹೊಲಗಳಲ್ಲಿ ನಡೆಯುತ್ತಿದ್ದಾಗ ದೊಡ್ಡ ಜನಸಮೂಹ ಅವರನ್ನು ಸುತ್ತುವರಿದಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರಿಂದ ಕೋಪಗೊಂಡ ಯಾದವ್, “ಎಸ್‌ಪಿ ಎಲ್ಲಿದ್ದಾರೆ? ವ್ಯವಸ್ಥೆಯನ್ನು ನಾನೇ ನೋಡಿಕೊಳ್ಳಬೇಕೇ?” ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಎಸ್‌ಪಿ ಅಮಿತ್ ಕುಮಾರ್, ಮುಖ್ಯಮಂತ್ರಿಗಳ ಮಾತಿಗೆ ತಲೆಯಾಡಿಸುತ್ತಾ, “ಹೌದು ಸರ್, ನಾನೇ.. ಮಾಡುತ್ತೇನೆ ಸರ್” ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಪರ-ವಿರೋಧ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಇಂತಹ ಪ್ರಮುಖರ ಭೇಟಿಯ ಸಂದರ್ಭದಲ್ಲಿ ಸರಿಯಾದ ವ್ಯವಸ್ಥೆ ಮಾಡಲು ವಿಫಲವಾದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು ಸರಿ ಎಂದು ಮುಖ್ಯಮಂತ್ರಿಗಳ ಬೆಂಬಲಿಗರು ವಾದಿಸಿದ್ದಾರೆ. ಆದರೆ, ಟೀಕಾಕಾರರು, ಅಧಿಕಾರಿಯನ್ನು ಸಾರ್ವಜನಿಕವಾಗಿ ನಿಂದಿಸುವುದು ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಮತ್ತು ಇದನ್ನು ಖಾಸಗಿಯಾಗಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜಿತು ಪಟ್ವಾರಿ, “ಮಾನ್ಯ ಮುಖ್ಯಮಂತ್ರಿಗಳೇ, ನೀವು ಫೋಟೋ, ರೀಲ್ಸ್, ವಿಡಿಯೋ ಮತ್ತು ಮಾಧ್ಯಮಗಳ ಹೆಡ್‌ಲೈನ್‌ಗಳಿಗಾಗಿ ಗಂಭೀರವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಆದರೆ ರೈತರಿಗೆ ನಿಜವಾಗಿ ಬೇಕಿರುವುದು ಸಮೀಕ್ಷೆ, ಗೊಬ್ಬರ, ಬೀಜ, ವಿಮೆ ಮತ್ತು ಪರಿಹಾರ. ದಯವಿಟ್ಟು ಅದರತ್ತ ಗಮನಹರಿಸಿ” ಎಂದು ಟೀಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ಜೊತೆಗಿದ್ದ ಅಧಿಕಾರಿಗಳು, ಬೆಳೆ ಸಮೀಕ್ಷೆಗಳು ಈಗಾಗಲೇ ನಡೆಯುತ್ತಿದ್ದು, ಮೌಲ್ಯಮಾಪನ ಪೂರ್ಣಗೊಂಡ ನಂತರ ಪರಿಹಾರವನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.