ದಕ್ಷಿಣ ಕನ್ನಡ\ಬೆಳ್ತಂಗಡಿ : ರೈತರೊಬ್ಬರ ಮೇಲೆ ಮನೆ ಅಂಗಳದ ಬಳಿಯೇ ಚಿರತೆಯೊಂದು ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ಜನವರಿ 16ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂಡೀರು ನಿವಾಸಿಯಾದ ಮಂಜಪ್ಪ ನಾಯ್ಕ (62) ಬೆಳಗ್ಗೆ ಸುಮಾರು 8.30ರ ಸುಮಾರಿಗೆ ಮನೆಯ ಅಂಗಳದ ಬದಿಯಲ್ಲಿ ಇರುವ ತೋಟಕ್ಕೆ ಹೋದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಗಾಬರಿಗೊಂಡ ಅವರು ಅಲ್ಲೇ ಇದ್ದ ಅಡಿಕೆ ಮರವನ್ನು ಹತ್ತಿದ್ದಾರೆ. ಈ ವೇಳೆ ಚಿರತೆ ಅವರ ಕಾಲಿಗೆ ಕಚ್ಚಿ ಪರಾರಿಯಾಗಿದೆ.
ಬೊಬ್ಬೆ ಕೇಳಿದ ಮನೆಯವರು ಬಂದು ನೋಡಿದಾಗ ಮಂಜಪ್ಪ ಅವರ ಕಾಲಿನಲ್ಲಿ ರಕ್ತ ಸುರಿಯುತಿದ್ದು, ತಕ್ಷಣ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅಡಿಕೆ ಮರದಲ್ಲಿ ಪರಚಿದ ಗುರುತುಗಳು ಕಂಡುಬಂದಿದೆ. ಸದ್ಯ ಚಿರತೆ ಸೆರೆಗಾಗಿ ಅರಣ್ಯಾಧಿಕಾರಿಗಳು ಅಲ್ಲಲ್ಲಿ ಬೋನ್ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಲಕ್ಕುಂಡಿ ಉತ್ಖನನ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ ಜಿಲ್ಲಾಡಳಿತ



















