ನವ ದೆಹಲಿ/ಬೆಂಗಳೂರು : ಕರ್ನಾಟಕದ ತಲಾ ಆದಾಯ ಈಗ 2 ಲಕ್ಷ ರೂಪಾಯಿ ದಾಟಿದ್ದು, 2,04,605 ರೂಪಾಯಿಗೆ ತಲುಪಿದೆ. ಇದು ಭಾರತದಲ್ಲಿಯೇ ಅತಿ ಹೆಚ್ಚಿನ ತಲಾ ಆದಾಯವಾಗಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತವೇ ಕಾರಣ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮರ್ಥಿಸಿಕೊಂಡಿದ್ದಾರೆ.
ರಾಷ್ಟ್ರೀಯ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್ ಖಾತೆ ʼಎಕ್ಸ್ʼ ಮೂಲಕ ಸಂದೇಶ ಪ್ರಕಟಿಸಿರುವ ಸುರ್ಜೆವಾಲ, ಈ ಗಮನಾರ್ಹ ಸಾಧನೆಗೆ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಆರ್ಥಿಕ ನೀತಿಗಳು ಕಾರಣ. ಜತೆಗೆ ಸಾಮಾನ್ಯ ನಾಗರಿಕರ ಸಬಲೀಕರಣದ ಗುರಿಯನ್ನು ಹೊಂದಿರುವ ‘ಗ್ಯಾರಂಟಿ ಯೋಜನೆಗಳು’ ನೇರ ಪರಿಣಾಮ ಬೀರಿವೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದರು. ಆದರೆ, ಕೇಂದ್ರ ಹಣಕಾಸು ಸಚಿವಾಲಯದ ದತ್ತಾಂಶವೇ ಈಗ ಅವರ ಪ್ರತಿಪಾದನೆಯ ಪೊಳ್ಳುತನವನ್ನು ಬಹಿರಂಗಪಡಿಸಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಕಾಂಗ್ರೆಸ್ ನಾಯಕತ್ವದಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತಿದೆ. ಇಂದು, ರಾಜ್ಯದ ಗ್ಯಾರಂಟಿ ಯೋಜನೆಗಳ ಆಧಾರಿತ ಆಡಳಿತ ಮಾದರಿಯು ಕೋಟ್ಯಂತರ ಕನ್ನಡಿಗರಿಗೆ ನೆರವಾಗಿದೆ. ಗ್ಯಾರಂಟಿಗಳ ಮೂಲಕ ವಾರ್ಷಿಕವಾಗಿ 53,000 ಕೋಟಿ ರೂ. ಮೊತ್ತದ ಸೌಲಭ್ಯವನ್ನು ನಾಗರಿಕರಿಗೆ ನೀಡಲಾಗುತ್ತಿದ್ದು, ರಾಷ್ಟ್ರೀಯ ಮಾನದಂಡವಾಗಿ ಹೊರಹೊಮ್ಮಿದೆ ಎಂದವರು ಹೇಳಿದ್ದಾರೆ.
ಕಲ್ಯಾಣದಿಂದ ಬೆಳವಣಿಗೆಯವರೆಗೆ, ಕರ್ನಾಟಕ ಮೇಲಿನ ಹಂತಕ್ಕೆ ಏರುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಗತಿಯನ್ನು ಜತೆಯಾಗಿ ಕೊಂಡೊಯ್ಯಬಹುದು ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
2024-25ನೇ ಹಣಕಾಸು ವರ್ಷದಲ್ಲಿ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು, 2 ಲಕ್ಷ ರೂ.ಗಳ ಮಿತಿಯನ್ನು ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ.


















