ಬೆಂಗಳೂರು : ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಶಾಸಕ ಕೆ.ಸಿ ವಿರೇಂದ್ರ ಪಪ್ಪಿಗೆ ಜೈಲಾ, ಬೇಲಾ ಎಂಬುವುದು ಇಂದು ನಿರ್ಧಾರವಾಗಲಿದೆ.
ಇ.ಡಿ ಅಧಿಕಾರಿಗಳು ವಿರೇಂದ್ರ ಪಪ್ಪಿಯವರನ್ನು ಮೊದಲ ಬಾರಿಗೆ 5 ದಿನ, 2ನೇ ಬಾರಿಗೆ 6 ದಿನ ಕಸ್ಟಡಿಗೆ ಪಡೆದಿದ್ದರು. ಇಂದು ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಒಂದು ವೇಳೆ ಇ.ಡಿ ಕಸ್ಟಡಿಗೆ ಪಡೆಯದಿದ್ದರೆ ಜೈಲಿಗೆ ತೆರಳುವ ಸಾಧ್ಯತೆ ಇದೆ.
ಈಗಾಗಲೇ ಪಪ್ಪಿ ಬ್ಯಾಂಕ್ ಖಾತೆಯಿಂದ 55 ಕೋಟಿ ನಗದು ಫ್ರೀಜ್ ಮಾಡಿರುವುದಾಗಿ ಇ.ಡಿ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ ಅವರ 9 ಬ್ಯಾಂಕ್ ಖಾತೆಗಳಲ್ಲಿ ಅಂದಾಜು 40.69 ಕೋಟಿ ನಗದು ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. ಸೇರಿದಂತೆ 55 ಕೋಟಿ ರೂ. ಹಣವನ್ನು ಇ.ಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.
ಜೊತೆಗೆ 5 ಐಷಾರಾಮಿ ಕಾರುಗಳನ್ನೂ ಸೀಜ್ ಮಾಡಲಾಗಿದ್ದು, ಹೀಗಾಗಿ ಹಣದ ಮೂಲ ಪತ್ತೆಗಾಗಿ ಮತ್ತೆ ಕಸ್ಟಡಿಗೆ ಕೇಳಲು ಇ.ಡಿ ಪ್ಲ್ಯಾನ್ ಮಾಡಿಕೊಂಡಿದೆ. ಒಂದು ವೇಳೆ ಕಸ್ಟಡಿಗೆ ಕೇಳದಿದ್ದರೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಕಳಿಸಲಿದೆ.


















