ಹೆಮ್ಮಾರಿ..ಮಹಾಮಾರಿ, ಪೆಂಡಭೂತ…ಯಾವ ಹೆಸರಿನಿಂದಲೇ ಕರೆದರೂ ಅದರ ಬಗೆಗಿನ ಭೀತಿ ಎಂಥಾ ಎಂಟೆದೆಯ ಬಂಟನ ಎದೆಯನ್ನೂ ಒಮ್ಮೆ ನಡುಗಿಸದೆ ಇರದು..ಸಮಸ್ತ ಜಗತ್ತೇ ಬೀಗ ಜಡಿದುಕೊಂಡು ಕೂತಲ್ಲೇ ಕೂರುವಂತೆ ಮಾಡಿದ್ದು ಡೆಡ್ಲಿ ಕೊವಿಡ್ ವೈರಸ್. ಹೌದು…ಆ ಕರಾಳ ಚರಿತ್ರೆಗೀಗ ಐದು ವರ್ಷ…ಮೊನ್ನೆ ಮಾರ್ಚ್ 24ಕ್ಕೆ ಭಾರತದಲ್ಲಿ ಮೊದಲ ಲಾಕ್ ಡೌನ್ ಹೇರಿ 5 ವರ್ಷ ಗತಿಸಿದೆ.
ಸಮಸ್ತ ಮನುಕುಲವೇ ಬುಡಮೇಲು
ಒಂದಿಡೀ ಪೀಳಿಗೆಯ ಸ್ಮೃತಿ ಪಲದಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ಈ ಮಾಹಾಮಾರಿ ಕೊವಿಡ್.. 2020ರ ಜನವರಿ 30 ಕೇರಳದ ತ್ರಿಶೂರಿನಲ್ಲಿ ಮೊದಲ ಕೊವಿಡ್ ಕೇಸ್ ಪತ್ತೆಯಾಗಿತ್ತು. ಅಷ್ಟೇ ಅಲ್ಲಿಂದ ಮುಂದೆ ನಡೆದದ್ದೆಲ್ಲ ಕರಾಳ ಅಧ್ಯಾಯಗಳೇ. ಸಾಲು ಸಾಲು ಕೊವಿಡ್ ಪ್ರಕರಣಗಳು..ಪರಿಹಾರೋಪಾಯವಿಲ್ಲದೆ ರಾತ್ರೋ ರಾತ್ರಿ ಸಮಸ್ತ ದೇಶಕ್ಕೇ ಬೀಗ ಮುದ್ರೆ. ದುಡಿಯಲು ಕೆಲಸವಿಲ್ಲ. ತಿನ್ನಲು ಹೊಟ್ಟೆಗೆ ಹಿಟ್ಟಿಲ್ಲ. ಎಲ್ಲಿಂದ ಇನ್ನೆಲ್ಲಿಗೋ ಬಂದು ದುಡಿದು ತಿಂತಿದ್ದವರ ಬದುಕು ಮೂರಾಬಟ್ಟೆ. ಮುಂದೇನು ಅನ್ನೋದಕ್ಕೆ ಉತ್ತರವಿಲ್ಲದೆ ಕಂಕಳಲ್ಲಿ ಕಂದಮ್ಮಗಳ ಕೂರಿಸಿಕೊಂಡು ಬರಿಗಾಲಲ್ಲಿ ರಸ್ತೆ, ರೈಲು ಹಳಿ, ಗುಡ್ಡ, ಹಳ್ಳ, ನದಿ ತೊರೆ ದಾಟಿ ನೂರಾರು ಕಿಲೋಮೀಟರ್ ಹೆಜ್ಜೆ ಹಾಕಿದವರು ಅದೆಷ್ಟೋ ಮಂದಿ. ಇತ್ತ ಮಹಾಮಾರಿಯ ರಣಾರ್ಭಟಕ್ಕೆ ಸಿಲುಕಿ ವಿಲವಿಲ ಒದ್ದಾಡಿ ಪ್ರಾಣತೆತ್ತವರೆಷ್ಟೋ? ಆಮ್ಲಜನಕವಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಯಿಲ್ಲ. ಅಂಬುಲೆನ್ಸ್ ಸಿಗಲಿಲ್ಲ ಹೀಗೆ ಜೀವ ಕೊಟ್ಟವರೆಷ್ಟೋ ಮಂದಿ. ಸಾವನಪ್ಪಿದ ತಮ್ಮವರ ಮುಖವನ್ನೂ ಅಂತಿಮವಾಗಿ ನೋಡುವ ಭಾಗ್ಯವೂ ಅದೆಷ್ಟೋ ಮಂದಿಗೆ ಸಿಗಲಿಲ್ಲ.
ವೈದ್ಯರು, ಫ್ರಂಟ್ ಲೈನ್ ಯೋಧರಿಗೆ ಸಲಾಂ!
ಸಮಸ್ತ ಭಾರತ ಕೊವಿಡ್ ಕಪಿಮುಷ್ಠಿಗೆ ಸಿಲುಕಿ ನರಳಿ ಹೋಗಿತ್ತು. ಶತಮಾನದ ಮಹಾ ವಿಪತ್ತು ಮನುಕುಲವನ್ನೇ ಆಹುತಿ ಪಡೆದುಬಿಡುತ್ತಾ? ಎಂಬ ಪ್ರಶ್ನೆ ಆವರಿಸಿತ್ತು. ಲಸಿಕೆ ಇಲ್ಲದ ಮಹಾಮಾರಿಯನ್ನು ಕಟ್ಟಿಹಾಕುವವರು ಯಾರು? ಎಂಬ ದೊಡ್ಡ ಪ್ರಶ್ನೆ ಎದುರಾಗಿತ್ತು. ಇದರ ನಡುವೆ, ಕೊವಿಡ್ ನಿಂದ ಬಳಲಿದವರ ರಕ್ಷಣೆಗೆ ಟೊಂಕಕಟ್ಟಿ ನಿಂತವರು ಅದೆಷ್ಟೋ ಮಂದಿ. ಅದರಲ್ಲೂ ತಮ್ಮದೇ ಪ್ರಾಣದ ಹಂಗುತೊರೆದು ಜೀವದಾನ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಸಲಾಂ ಹೇಳಲೇ ಬೇಕು ತಮ್ಮವರಿಲ್ಲದೆ ಅನಾಥ ಶವವಾದವರನ್ನು ಸಂಪ್ರಾದಯದನ್ವಯ ಕ್ರಿಯಾ ಕರ್ಮ ಮಾಡಿದ ಚಿತಾಗಾರ ಸಿಬ್ಬಂದಿಗೊಂದು ಥ್ಯಾಂಕ್ಸ್ ಹೇಳಲೇ ಬೇಕು.ಕಷ್ಟ ಕಾಲದಲ್ಲೂ ಕಾವಲಿಗೆ ನಿಂತ ಪೊಲೀಸ್ ಬಳಗಕ್ಕೊಂದು ಕೃತಜ್ಞತೆ ಸಲ್ಲಿಸಲೇಬೇಕು. ಉಳಿದಂತೆ ಹಸಿದವರಿಗೆ ಅನ್ನಹಾಕಿದ, ಸೂರಿಲ್ಲದವರಿಗೆ ನೆಲೆ ಒದಗಿಸಿದ, ಎಲ್ಲವನ್ನೂ ಕಳೆದುಕೊಂಡವರಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತವರು ಅದೆಷ್ಟೋ ಮಂದಿ… ಅಂಥವರಿಗೂ ಸಲಾಂ ಹೇಳಲೇಬೇಕು.
ಮತ್ತೆಂದು ಮರುಕಳಿಸದಿರಲಿ ಕರಾಳ ನೆನಪು
ಐದು ವರ್ಷಗಳ ಸುದೀರ್ಘ ಪಯಣವನ್ನು ಮಾಡಿಯಾಗಿದೆ. ಮಹಾಮಾರಿಯನ್ನೇ ಗೆದ್ದವರು ಈಗ ವ್ಯಾಕ್ಸಿನ್ ಹಾಕಿಸಿಕೊಂಡು ಗೆದ್ದು ಬೀಗಿರಬಹುದು. ಬಟ್..ಐದು ವರ್ಷಗಳ ಹಿಂದೆ ಆ ಕರಾಳ ಚಹರೆ ನೆನಪಿಸಿಕೊಂಡರೆ, ಲಾಕ್ ಡೌನ್ ನಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳು. ವ್ಯಾಪಾರವಿಲ್ಲದೆ ಮುಗುಮ್ ಮಲಗಿದ್ದ ಮಾರುಕಟ್ಟೆಗಳು, ನಿಂತಲ್ಲೇ ನಿಂತಿದ್ದ ವಾಹನಗಳು, ಮಕ್ಕಳಿಲ್ಲದೆ ಬಣಗುಡುತ್ತಿದ್ದ ಶಾಲೆಗಳು, ಉದ್ಯೋಗಿಗಳಿಲ್ಲದೆ ಕಳೆಗುಂದಿದ್ದ ದೈತ್ಯ ಕಂಪನಿ ಕಚೇರಿಗಳು. ಹೀಗೆ ಸಾವಿರಾರು ನೆನಪುಗಳು. ಲಕ್ಷಾಂತರ ಕ್ಷಣಗಳು.ಒಂದನ್ನೂ ಮರೆಯಲಾದದಂತಹ ಸನ್ನಿವೇಶ…ಕೊವಿಡ್ ಅದೆಷ್ಟೋ ಹೊಸತುಗಳನ್ನು ಕಲಿಸಿರಬಹುದು…ಅದೆಷ್ಟೋ ಪಾಠ ಹೇಳಿಕೊಟ್ಟಿರಬಹುದು..ಐದು ವರ್ಷಗಳ ಹಿಂದಿನ ಈ ರಾಕ್ಷಸಿ ಬೆಳವಣಿಗೆ ಅದೆಷ್ಟೋ ಮಂದಿಯನ್ನು ಇಂದಿಗೂ ಚೇತರಿಸಿಕೊಳ್ಳದಿರುವಂತೆ ಮಾಡಿದೆ. ಅದೇನೇ ಇರಲಿ..5 ವರ್ಷಗಳು ಗತಿಸಿಹೋಗಿವೆ. ಆದರೆ, ಅದರ ಕರಾಳ ಹೆಜ್ಜೆ ಗುರುತುಗಳು ಮಾತ್ರ ಇಂದಿಗೂ ನಮ್ಮ ನಿಮ್ಮ ನಡುವೆ ಜೀವಂತವಾಗಿರುವುದು ಸತ್ಯ.



















