ಟೆಹ್ರಾನ್ : ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿರುವಂತೆಯೇ ಇರಾನ್ ಸರ್ಕಾರವು ಹಡಗುಗಳ ಸಂಚಾರಕ್ಕಾಗಿ ಹೊಸ ನೌಕಾ ನಕ್ಷೆ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಸಮುದ್ರದ ಆಳದಲ್ಲಿ ಅಳವಡಿಸಲಾಗಿರುವ ಸ್ಫೋಟಕಳಿಂದ (Sea Mines) ಉಂಟಾಗಬಹುದಾದ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ಹೇಳಿದ್ದರೂ, ಜಲಸಂಧಿಯು ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಿಡುಗಡೆ ಮಾಡಿರುವ ಹೊಸ ನಕ್ಷೆಯ ಪ್ರಕಾರ, ನೌಕೆಗಳು ಇನ್ನು ಮುಂದೆ ಇರಾನ್ ನಿಗದಿಪಡಿಸಿದ ನಿರ್ದಿಷ್ಟ ಪಥದಲ್ಲೇ ಸಾಗಬೇಕಿದೆ. ಓಮಾನ್ ಸಮುದ್ರದಿಂದ ಬರುವ ನೌಕೆಗಳು ಲಾರಾಕ್ ದ್ವೀಪದ ಉತ್ತರ ಭಾಗದ ಮೂಲಕ ಗಲ್ಫ್ ಪ್ರವೇಶಿಸಬೇಕು ಮತ್ತು ಗಲ್ಫ್ನಿಂದ ಹೊರಹೋಗುವ ಹಡಗುಗಳು ದ್ವೀಪದ ದಕ್ಷಿಣ ಭಾಗದ ಮಾರ್ಗವನ್ನು ಅನುಸರಿಸಬೇಕು. ಈ ಕಟ್ಟುನಿಟ್ಟಿನ ಸಂಚಾರ ಮಾದರಿಯು ವಾಣಿಜ್ಯ ಹಡಗುಗಳು ಅಪಾಯಕಾರಿ ವಲಯಗಳಿಗೆ ಪ್ರವೇಶಿಸುವುದನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಕದನ ವಿರಾಮ ಗೊಂದಲ
ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ಒಪ್ಪಂದದ ಅನ್ವಯ, ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕಿತ್ತು. ಆದರೆ, ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಕದನ ವಿರಾಮದ ಉಲ್ಲಂಘನೆ ಎಂದು ಪರಿಗಣಿಸಿರುವ ಇರಾನ್, ಬುಧವಾರ ರಾತ್ರಿ ಜಲಸಂಧಿಯನ್ನು ಮತ್ತೆ ಮುಚ್ಚಿದೆ ಎಂಬ ವರದಿಗಳು ಬಂದಿವೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯ ಶೇಕಡಾ 20 ರಷ್ಟು ಭಾಗವನ್ನು ನಿರ್ವಹಿಸುವ ಈ ಮಾರ್ಗದಲ್ಲಿ ಮತ್ತೆ ಅನಿಶ್ಚಿತತೆ ಮನೆಮಾಡಿದೆ.
ನಾಳೆಯಿಂದ ಭಾಗಶಃ ಸಂಚಾರ ಆರಂಭ?
ಈ ನಡುವೆ, ಇರಾನ್ನ ಉಸ್ತುವಾರಿಯಲ್ಲಿ ಜಲಸಂಧಿಯ ಭಾಗಶಃ ಮರುಪ್ರಾರಂಭವು ಶುಕ್ರವಾರದಿಂದ ನಡೆಯಬಹುದು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಯ ಫಲವಾಗಿ ಈ ಬೆಳವಣಿಗೆ ನಿರೀಕ್ಷಿಸಲಾಗುತ್ತಿದೆ. ಆದರೆ, ಈ ಮಾರ್ಗವಾಗಿ ಸಾಗುವ ಹಡಗುಗಳು ಕಡ್ಡಾಯವಾಗಿ ಇರಾನ್ನ ನೌಕಾಪಡೆಯೊಂದಿಗೆ ಸಮನ್ವಯ ಸಾಧಿಸಬೇಕು ಎಂಬ ಷರತ್ತನ್ನು ಇರಾನ್ ವಿಧಿಸಿದೆ. ಸಮನ್ವಯ ಸಾಧಿಸದೇ ಜಲಸಂಧಿ ದಾಟಲು ಮುಂದಾದರೆ ಅಂಥ ನೌಕೆಗಳನ್ನು ಆ ಕ್ಷಣದಲ್ಲೇ ಸ್ಫೋಟಿಸಲಾಗುತ್ತದೆ ಎಂದೂ ಎಚ್ಚರಿಸಿದೆ.
ಇದನ್ನೂ ಓದಿ : ಭಾರತೀಯ ಸೇನೆಯಲ್ಲಿ 117 ಹುದ್ದೆಗಳ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ



















