ಬೆಂಗಳೂರು : ಪೋಸ್ಟ್ ಆಫೀಸ್ ಗಳಲ್ಲಿರುವ ಸಣ್ಣ ಉಳಿತಾಯ ಯೋಜನೆಗಳು ಕೇಂದ್ರ ಸರ್ಕಾರದ ಬೆಂಬಲ ಹೊಂದಿರುವ ಕಾರಣ ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚು ಹೂಡಿಕೆ ಮಾಡುತ್ತಾರೆ. ಈಗ ಕೇಂದ್ರ ಹಣಕಾಸು ಸಚಿವಾಲಯವು 2026ರ ಜುಲೈ 1ರಿಂದ 2026ರ ಸೆಪ್ಟೆಂಬರ್ 1ರವರೆಗಿನ ತ್ರೈಮಾಸಿಕಕ್ಕೆ ಬಡ್ಡಿದರ ಘೋಷಣೆ ಮಾಡಿದೆ. ಸತತ 9ನೇ ತ್ರೈಮಾಸಿಕಕ್ಕೂ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಪಿಪಿಎಫ್, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ವಿಕಾಸ್ ಪತ್ರ ಸೇರಿದಂತೆ ಯಾವುದೇ ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಭಾರತದಲ್ಲಿ ಆರ್ಥಿಕತೆ ಬಿಕ್ಕಟ್ಟು ಉಂಟಾಗಿದ್ದು, ಬಡ್ಡಿದರದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇತ್ತು. ಆದರೆ, ಸರ್ಕಾರವು ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಹೂಡಿಕೆದಾರರು ನಿಶ್ಚಿತ ಆದಾಯ ಪಡೆಯಲು ಇದು ಸಹಕಾರಿಯಾಗಲಿದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪಟ್ಟಿ
- ಸುಕನ್ಯಾ ಸಮೃದ್ಧಿ ಯೋಜನೆ (SSY) 8.2%
- ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 8.2%
- ರಾಷ್ಟ್ರೀಯ ಉಳಿತಾಯ ಪತ್ರ (NSC) 7.7%
- ಕಿಸಾನ್ ವಿಕಾಸ್ ಪತ್ರ (KVP) 7.5%
- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) 7.4%
- ಸಾರ್ವಜನಿಕ ಭವಿಷ್ಯ ನಿಧಿ (PPF) 7.1%
- 5 ವರ್ಷದ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ 7.5%
- 3 ವರ್ಷದ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ 7.1%
- ಪೋಸ್ಟ್ ಆಫೀಸ್ ಉಳಿತಾಯ ಖಾತೆ (SB) 4.0%
ಸಣ್ಣ ಉಳಿತಾಯ ಯೋಜನೆಗಳ ಪೈಕಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ‘ಸುಕನ್ಯಾ ಸಮೃದ್ಧಿ ಯೋಜನೆ’ ಮತ್ತು ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ ಪ್ರಸ್ತುತ ಅತಿ ಹೆಚ್ಚು ಅಂದರೆ ಶೇ. 8.2 ರಷ್ಟು ಗರಿಷ್ಠ ಬಡ್ಡಿದರವನ್ನು ಮುಂದುವರಿಸಿವೆ. ಸುರಕ್ಷಿತ ಹಾಗೂ ನಿಗದಿತ ಆದಾಯವನ್ನು ಬಯಸುವ ಮಧ್ಯಮ ವರ್ಗದ ಹೂಡಿಕೆದಾರರಿಗೆ ಇದು ಒಳ್ಳೆಯ ರಿಟರ್ನ್ಸ್ ಆಗಿದೆ.
ಇದನ್ನೂ ಓದಿ : 168 ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರ ನೇಮಕಾತಿಗೆ ಅರ್ಜಿ ಆಹ್ವಾನ!



















