ಭಾರತದ ಪ್ರಧಾನಿಯೊಬ್ಬರು ಬರೋಬ್ಬರಿ 56 ವರ್ಷಗಳನಂತರ ಗಯಾನಾಗೆ ಆಗಮಿಸಿದ್ದು, ಭವ್ಯವಾಗಿ ಸ್ವಾಗತಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಹಾಡಿ ಹೊಗಳಿದ್ದಾರೆ. ಈ ಪೈಕಿ ಅವರಲ್ಲಿ ಹಲವರು 180 ವರ್ಷಗಳ ಹಿಂದೆಯೇ ಭಾರತ ಬಿಟ್ಟು ವಲಸೆ ಬಂದಿದ್ದಾರೆ. ಗಯಾನಾದಲ್ಲಿ ಭಾರತೀಯ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು 56 ವರ್ಷಗಳ ನಂತರ ಗಯಾನಾಗೆ ಭಾರತದ ಮುಖ್ಯಸ್ಥರ ಮೊದಲ ಭೇಟಿಯಾಗಿದೆ. ಅವರು ಮಂಗಳವಾರ ರಾತ್ರಿ ಬ್ರೆಜಿಲ್ ನಿಂದ ನಿರ್ಗಮಿಸಿದ ನಂತರ ಇಂದು ಬೆಳ್ಳಂಬೆಳಗ್ಗೆ ಗಯಾನಾಗೆ ಆಗಮಿಸಿದರು. ಈ ವೇಳೆ ಹೋಟೆಲ್ ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಯಾನಾದ ಅಧ್ಯಕ್ಷ, ಗ್ರೆನಡಾದ ಪ್ರಧಾನಿ, ಬಾರ್ಬಡೋಸ್ ನ ಪ್ರಧಾನಿ ಮತ್ತು ಗಯಾನಾದ ಹಲವಾರು ಕ್ಯಾಬಿನೆಟ್ ಮಂತ್ರಿಗಳು ವಿಶೇಷ ಸ್ವಾಗತ ನೀಡಿದರು.
ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಗಯಾನಾದಲ್ಲಿನ ಭಾರತೀಯ ಸಮುದಾಯಕ್ಕೆ ಅವರ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ದೂರ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುವುದನ್ನು ನೀವು ತೋರಿಸಿದ್ದೀರಿ. ಭಾರತೀಯ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದನ್ನು ನೋಡಲು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.