ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಹಾಕಿ ಪಡೆ ಉತ್ತಮ ಪ್ರದರ್ಶನ ಮುಂದುವರೆಸಿದೆ. ಈ ಮೂಲಕ ಭಾರತ ತಂಡ ಪುರುಷರ ಹಾಕಿ ಸ್ಪರ್ಧೆಯಲ್ಲಿ ನಾಕ್‌ಔಟ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಹರ್ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಅಪಾಯಕಾರಿ ಐರ್ಲೆಂಡ್ ತಂಡದ ಎದುರು 2-0 ಗೋಲ್ ಗಳ ಆಕರ್ಷಕ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 2-1 ಗೋಲ್ ಗಳಿಂದ ಮಣಿಸಿದ್ದ ಭಾರತ ತಂಡ, ನಂತರ ಎರಡನೇ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಿ ಅರ್ಜೆಂಟೀನಾ ಎದುರು 1-1 ಅಂತರದ ರೋಚಕ ಡ್ರಾ ಸಾಧಿಸಿತು. ಮೂರನೇ ಪಂದ್ಯದಲ್ಲಿ ಐರ್ಲೆಂಡ್ ಎದುರು ಅಧಿಕಾರಯುತ ಜಯ ಸಾಧಿಸಿ, ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಈ ಪಂದ್ಯದಲ್ಲಿ ಎರಡೂ ಗೋಲುಗಳನ್ನು ನಾಯಕ ಹರ್ಮನ್ ಪ್ರೀತ್ ಸಿಂಗ್ ಗಳಿಸಿದ್ದಾರೆ. ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲೂ ಹರ್ಮನ್‌ಪ್ರೀತ್ ಕಡೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತಕ್ಕೆ ಸೋಲು ತಪ್ಪಿಸಿದ್ದರು. ಈಗ ಲಯ ಕಾಯ್ದುಕೊಂಡು ಐರ್ಲೆಂಡ್ ಎದುರು ಪಂದ್ಯ ಗೆದ್ದುಕೊಟ್ಟಿದ್ದಾರೆ.
ಐರ್ಲೆಂಡ್ ವಿರುದ್ದದ ಈ ಗೆಲುವಿನೊಂದಿಗೆ ಭಾರತ ತಂಡ ‘ಬಿ” ಗುಂಪಿನ ಅಂಕಪಟ್ಟಿಯಲ್ಲಿ ಬಲಿಷ್ಠ ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ. ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾ ತಂಡಗಳು ತಮ್ಮ ಪಾಲಿನ 3ನೇ ಪಂದ್ಯ ಆಡುವುದು ಇನ್ನು ಬಾಕಿ ಇದೆ. 6 ತಂಡಗಳನ್ನು ಒಳಗೊಂಡ ಈ ಗುಂಪಿನಲ್ಲಿ ಅಗ್ರ 4 ಷ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಎಂಟ್ರಿ ಕೊಡಲಿವೆ. ಎರಡನೇ ಜಯ ದಾಖಲಿಸಿರುವ ಭಾರತ ತಂಡ ನಾಕ್‌ಔಟ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಈ ಪಂದ್ಯದ ಮೊದಲ ಅವಧಿಯಲ್ಲೇ ಸಿಕ್ಕ ಪೆನಾಲ್ಟಿ ಸ್ಟ್ರೈಕ್‌ನಲ್ಲಿ ಇಂಡಿಯಾ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಡ್ರ್ಯಾಕ್ ಫ್ಲಿಕ್ ಸ್ಪೆಷಲಿಸ್ಟ್ ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಏಕಾಗ್ರತೆಯಿಂದ ಗೋಲು ಗಳಿಸಿ ಮೊದಲ ಅವಧಿ ಅಂತ್ಯಕ್ಕೆ 1-0 ಅಂತರದ ಮೇಲುಗೈ ತಂದರು. ಬಳಿಕ ಎರಡನೇ ಅವಧಿಯಲ್ಲಿ ಅಂದರೆ 19ನೇ ನಿಮಿಷದಲ್ಲಿ ಭಾರತ ತಂಡ ಗೋಲ್ ಅಂತರವನ್ನು 2-0ಗೆ ವಿಸ್ತರಿಸಿತು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲ್ ಪ್ರಮಾಣ ಹೆಚ್ಚಿಸಿಕೊಳ್ಳುವಲ್ಲಿ ಭಾರತ ಸಫಲವಾಯಿತು.
ಎರಡನೇ ಅವಧಿಯ ಮುಕ್ತಾಯಕ್ಕೆ 2-0 ಅಂತರದ ಮೇಲುಗೈ ಸಾಧಿಸಿದ ಭಾರತ ರಕ್ಷಣಾತ್ಮಕ ಆಟವಾಡಿತು. ಎದುರಾಳಿ ತಂಡಕ್ಕೆ ಗೋಲ್ ಬಾರಿಸುವ ಯಾವುದೇ ಅವಕಾಶ ನೀಡದೆ ಗೋಲ್ ಪಟ್ಟೆಗೆ ಕಾಯ್ದುಕೊಂಡು 60 ನಿಮಿಷಗಳ ಆಟದ ಅಂತ್ಯಕ್ಕೆ ಗೆಲುವು ದಾಖಲಿಸಿತು. ಭಾರತ ತಂಡ ಆಗಸ್ಟ್ 1ರಂದು ತನ್ನ ಮುಂದಿನ ಪಂದ್ಯ ಆಡಲಿದ್ದು, ವಿಶ್ವ ಚಾಂಪಿಯನ್ಸ್ ಬೆಲ್ಜಿಯಂ ಎದುರು ಸೆಣಸಾಟ ನಡೆಸಲಿದೆ.