ಪ್ಯಾರಿಸ್ ಒಲಿಂಪಿಕ್ಸ್ ನ ಕೆಲವು ಕ್ರೀಡೆಯಲ್ಲಿ ಭಾರತೀಯರ ಪ್ರದರ್ಶನ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಹಾಕಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತೀಯ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಭಾರತ ತಂಡ ಮುಂದಿನ ಹಂತಕ್ಕೆ ಕಾಲಿಟ್ಟಿದೆ. ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಉತ್ತಮ ಹೊಂದಾಣಿಕೆಯ ಪ್ರದರ್ಶನ ನೀಡಿದ ಭಾರತ ತಂಡ ಆರಂಭದಲ್ಲೇ ಐರ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿತ್ತು. ಹೀಗಾಗಿ 11ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು.
18ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಅವರು ಮಿಡ್ ಫೀಲ್ಡ್ ನಲ್ಲಿ ಉತ್ತಮ ಪಾಸ್ ನೀಡಿದ್ದರು. ಈ ಪಾಸ್ ನ್ನು ಮನ್‌ದೀಪ್ ಸಿಂಗ್ ಗೋಲಾಗಿಸಲು ಯತ್ನಿಸಿದ್ದರು. ಈ ವೇಳೆ ಐರ್ಲೆಂಡ್ ಆಟಗಾರನ ತಪ್ಪಿನಿಂದಾಗಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಸಿಕ್ಕಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್‌ಪ್ರೀತ್ ಸಿಂಗ್ ಯಶಸ್ವಿಯಾದರು. ಈ ಮೂಲಕ ಭಾರತ ತಂಡವು 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ, ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಈ ಗೆಲುವಿಗೂ ಮುನ್ನ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3-2 ಅಂತರದಿಂದ ಗೆಲುವು ಸಾಧಿಸಿತ್ತು. ಅರ್ಜೆಂಟೀನಾ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿತ್ತು. ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಮುಂದಿನ ಹಂತಕ್ಕೆ ಏರಿಕೆ ಕಂಡಿದೆ.
ಲೀಗ್ ಹಂತದ ಮುಂದಿನ ಪಂದ್ಯದಲ್ಲಿ ಭಾರತ ತಂಡ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಮುಂದಿನ ಹಂತಕ್ಕೇರಿದರೂ ಈ ಪಂದ್ಯ ಭಾರತದ ಪಾಲಿಗೆ ತುಂಬಾ ಮಹತ್ವ ಪಡೆದಿದೆ. ವಿಶ್ವ ಹಾಕಿ ಶ್ರೇಯಾಂಕದಲ್ಲಿ ಬೆಲ್ಜಿಯಂ 4ನೇ ಸ್ಥಾನದಲ್ಲಿರುವ ತಂಡ. ಈಗ ಬೆಲ್ಜಿಯಂ ತಂಡ ಕೂಡ ಉತ್ತಮ ಪ್ರದರ್ಶನ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಲ್ಜಿಯಂ ಸೋಲಿಸಿ, ಪಾಯಿಂಟ್ ಪಟ್ಟಿಯಲ್ಲಿ ಟಾಪ್ ನಲ್ಲಿ ಬಂದರೆ, ಮುಂದಿನ ಹಂತದಲ್ಲಿ ಕಡಿಮೆ ಶ್ರೇಯಾಂಕದ ತಂಡದ ಎದುರು ಸೆಣಸಾಟ ನಡೆಸಬಹುದು. ಹೀಗಾಗಿ ಇನ್ನೆರಡು ಪಂದ್ಯಗಳನ್ನು ಗೆಲ್ಲರು ಭಾರತ ತಂಡ ಉತ್ಸುಕವಾಗಿದೆ.