ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 6 ಪದಕ ಗೆಲ್ಲುವುದರ ಮೂಲಕ ಭಾರತ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ಈ ಮೂಲಕ ಕಳೆದ ಬಾರಿಗಿಂತಲೂ ಒಂದು ಪದಕದ ಹಿನ್ನಡೆಯನ್ನು ಭಾರತ ಅನುಭವಿಸಿತು. ಆದರೆ, ಈ ಬಾರಿ ಕೆಲವರು ಹೋರಾಡಿ ಪದಕದ ಹೊಸ್ತಿಲಿನಲ್ಲಿ ಎಡವಿದ್ದು, ಮಾತ್ರ ಆತ್ಮವಿಶ್ವಾಸ ಹೆಚ್ಚಿಸಿದೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕ ಗೆದ್ದಿದ್ದ ಭಾರತ ಈ ಬಾರಿ ಒಂದು ಬೆಳ್ಳಿ, 5 ಪದಕ ಗೆದ್ದು, ಚಿನ್ನ ಇಲ್ಲದೆ ಒಟ್ಟು 6 ಪದಕ ಗೆದ್ದು ತನ್ನ ಅಭಿಯಾನ ಮುಗಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಗೆ ಈ ಬಾರಿ 117 ಭಾರತೀಯ ಕ್ರೀಡಾಪಟುಗಳು ತೆರಳಿದ್ದರು. ಈ ಪೈಕಿ ಪದಕ ಗೆದ್ದವರು ಮಾತ್ರ ನಾಲ್ವರು ಹಾಗೂ ಹಾಕಿ ತಂಡ ಮಾತ್ರ. ಮನು ಭಾಕರ್ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಯಂಗ್ ಶೂಟರ್ ಮನು ಭಾಕರ್ ಅವರು ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡುವ ಮೂಲಕ ಮನು, ಭಾರತದ ಪದಕದ ಖಾತೆ ತೆರೆದಿದ್ದರು. ನಂತರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮನು ಭಾಕರ್ ದೇಶಕ್ಕೆ 2ನೇ ಪದಕ ತಂದು ಕೊಟ್ಟರು. ಈ ಮೂಲಕ ಒಂದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆಯನ್ನು ಮನು ಭಾಕರ್ ಮಾಡಿದ್ದಾರೆ.
ಮೂರನೇ ಪದಕ ಕೂಡ ಭಾರತಕ್ಕೆ ಶೂಟಿಂಗ್ ನಲ್ಲಿ ಬಂದಿದೆ. 50 ಮೀ ರೈಫಲ್ ಶೂಟಿಂಗ್ ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದರು. ಪುರುಷರ ಹಾಕಿ ತಂಡ ದೇಶದ ನಾಲ್ಕನೇ ಕಂಚು ಗೆದ್ದಿತು. ಭಾರತ ಹಾಕಿ ತಂಡ ಸ್ಪೇನ್ ತಂಡವನ್ನು 2-1 ಅಂತರದಿಂದ ಸೋಲಿಸುವ ಮೂಲಕ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿತು.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಬಂಗಾರದ ಹುಡುಗ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ 2ನೇ ಸ್ಥಾನ ಪಡೆದು ಬೆಳ್ಳಿಗೆ ತೃಪ್ತಿ ಪಟ್ಟರು. ಈ ಮೂಲಕ ಸತತ ಎರಡು ಆವೃತ್ತಿಗಳಲ್ಲಿ ಪದಕ ಗೆದ್ದ ವಿಶೇಷ ಸಾಧನೆ ಮಾಡಿದ್ದಾರೆ. ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಭಾರತಕ್ಕಾಗಿ ಕಂಚು ಗೆಲ್ಲುವ ಮೂಲಕ 6ನೇ ಪದಕ ತಂದು ಕೊಟ್ಟರು. ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 21 ವರ್ಷದ ಅಮನ್ ಕಂಚಿನ ಪದಕ ಗೆದ್ದರು.
ಆದರೆ, ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರು 50 ಕೆ.ಜಿ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದರೂ ಫೈನಲ್ ಸುತ್ತಿನ ಸಂದರ್ಭದಲ್ಲಿ ಹೆಚ್ಚುವರಿ ತೂಕದ ಕಾರಣ ಅನರ್ಹಗೊಂಡಿದ್ದಾರೆ. ಸೆಮಿಫೈನಲ್ ವರೆಗೂ ಅರ್ಹತೆಯೊಂದಿಗೆ ಸ್ಪರ್ಧಿಸಿರುವ ಕಾರಣ ಬೆಳ್ಳಿ ಪದಕ ನೀಡಬೇಕೆಂದು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇಂದು ತೀರ್ಪು ಬರುವ ಸಾಧ್ಯತೆ ಇದೆ. ಒಂದು ವೇಳೆ ವಿನೇಶ್ ಗೆ ಬೆಳ್ಳಿ ತೀರ್ಪು ಬಂದರೆ, ಭಾರತಕ್ಕೆ 2ನೇ ಬೆಳ್ಳಿ ಹಾಗೂ 7ನೇ ಪದಕ ಸಿಕ್ಕಂತಾಗುತ್ತದೆ.