ಕಲಬುರಗಿ : ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ, ನಂತರ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಪುತ್ರ ಎಂಬಾತ ತನ್ನ 23 ವರ್ಷದ ಪತ್ನಿ ಅಂಜಲಿಯನ್ನು ಕ್ಷುಲ್ಲಕ ಕಾರಣಕ್ಕಾಗಿ ಮನೆಯಲ್ಲೇ ಕುಡುಗೋಲಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಹೆಂಡತಿಯ ಕೊಲೆಯ ನಂತರ ತೀವ್ರ ಆತಂಕಕ್ಕೊಳಗಾದ ಲಕ್ಷ್ಮೀಪುತ್ರ, ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಗ್ರಾಮದ ಸಮೀಪದ ಬಾವಿಯತ್ತ ಓಡಿ ನೀರಿಗೆ ಜಿಗಿದಿದ್ದಾನೆ.
ಲಕ್ಷ್ಮೀಪುತ್ರ ಮಗುವಿನೊಂದಿಗೆ ಬಾವಿಗೆ ಹಾರುತ್ತಿರುವುದನ್ನು ಕಂಡ ಸ್ಥಳೀಯರು ಸಮಯಪ್ರಜ್ಞೆ ಮೆರೆದು, ಮಗುವನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿದ ಲಕ್ಷ್ಮೀಪುತ್ರನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ವಿಷಯ ತಿಳಿದ ತಕ್ಷಣ ರೇವೂರು ಪೊಲೀಸರು ಹಾಗೂ ಸೋಕೋ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಬಾವಿಯಿಂದ ಲಕ್ಷ್ಮೀಪುತ್ರನ ಶವವನ್ನು ಹೊರತೆಗೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ರೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗಾಂಜಾ ಸೇವಿಸದಿದ್ರೂ ಕೇಸ್ ; ಧಾರವಾಡದಲ್ಲಿ ಪೊಲೀಸರ ಕಿರುಕುಳಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ?



















