ಬೆಂಗಳೂರು : ಪ್ರಿಯಕರನ ಜೊತೆ ಸೇರಿ ಗಂಡ ಹಾಗೂ ಮಗುವನ್ನು ಕೊಲೆ ಮಾಡಿದ ಪ್ರಕರಣದ ತನಿಖೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಗಂಡನ ಕೊಲೆಗೆ ಥೇಟ್ ಸಿನಿಮಾ ರೀತಿಯಲ್ಲಿ ಪ್ಲಾನ್ ಮಾಡಿದ್ದ ಹರಿಣಿ, ಮೊಬೈಲ್‌ನಲ್ಲಿರುವ ಆ್ಯಪ್‌ಗಳ ಮೂಲಕ ಕೊಲೆ ಹೇಗೆ ಮಾಡಬೇಕು, ಸಾಕ್ಷ್ಯಗಳನ್ನು ಹೇಗೆ ನಾಶ ಮಾಡಬೇಕು ಎಂಬ ಬಗ್ಗೆ ಮಾಹಿತಿ ಹುಡುಕಿದ್ದಳು ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳಿಂದಲೇ ಗಂಡನ ಕೊಲೆಗೆ ಸಂಚು ರೂಪಿಸಿದ್ದ ಹರಿಣಿ, ಕೊಲೆ ಬಳಿಕ ಅನುಮಾನ ಬಾರದಂತೆ ಕ್ರೈಂ ಸೀನ್ ಹೇಗೆ ಸಿದ್ಧಪಡಿಸಬೇಕು ಎಂಬುದನ್ನೂ ಮೊಬೈಲ್ ಮೂಲಕ ಸರ್ಚ್ ಮಾಡಿದ್ದಳು ಎನ್ನಲಾಗಿದೆ.
ಪ್ರಿಯಕರನ ಬಗ್ಗೆ ಪೊಲೀಸರಿಗೆ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಹರಿಣಿ ತನ್ನ ಮೊಬೈಲ್‌ನಲ್ಲಿದ್ದ ಬಹುತೇಕ ಕಾಂಟ್ಯಾಕ್ಟ್‌ಗಳನ್ನು ಡಿಲೀಟ್ ಮಾಡಿದ್ದಳು. ಸುಮಾರು 18–20 ನಂಬರ್‌ಗಳನ್ನು ಮಾತ್ರ ಮೊಬೈಲ್‌ನಲ್ಲಿ ಉಳಿಸಿಕೊಂಡಿದ್ದಳು. ಪೊಲೀಸರು ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಅಂಶಗಳು ಪತ್ತೆಯಾಗಿದ್ದು, ಕೊಲೆಗೆ ಮುನ್ನ ಹರಿಣಿ ನಡೆಸಿದ್ದ ಸಿದ್ಧತೆಗಳ ಬಗ್ಗೆ ತನಿಖಾಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ.
ಇನ್ನು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆ ನೋವಿನಿಂದ ಬಳಲುತ್ತಿದ್ದ ಅಭಿನಂದನ್‌ನ ಆರೋಗ್ಯ ಸಮಸ್ಯೆಯನ್ನೇ ಬಳಸಿಕೊಂಡು ಹೃದಯಾಘಾತದಿಂದ ಮೃತಪಟ್ಟಂತೆ ಬಿಂಬಿಸಲು ಹಂತಕರು ಸಂಚು ರೂಪಿಸಿದ್ದರು. ಮಧ್ಯರಾತ್ರಿ ಮನೆಯ ಸಿಸಿಟಿವಿಯನ್ನು ಆಫ್ ಮಾಡಿ, ಮಲಗಿದ್ದ ಅಭಿನಂದನ್‌ನನ್ನು ದಿಂಬಿನಿಂದ ಉಸಿರುಗಟ್ಟಿಸಲು ಯತ್ನಿಸಿದ್ದಾರೆ. ಈ ವೇಳೆ ಅಭಿನಂದನ್ ಪ್ರತಿರೋಧ ವ್ಯಕ್ತಪಡಿಸಿದ್ದು, ಬಾತ್‌ರೂಂವರೆಗೂ ತಳ್ಳಾಟ ನಡೆದಿದೆ. ಬಳಿಕ ಹರಿಣಿ ಆತನ ತಲೆಗೆ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಗಂಡನ ಕೊಲೆಯ ವೇಳೆ ನಡೆದ ಗಲಾಟೆಯ ಸದ್ದು ಕೇಳಿ ಮಗು ಎಚ್ಚರಗೊಂಡಿತ್ತು. ಮಗು ವಿಚಾರವನ್ನು ಹೊರಗೆ ಹೇಳಿಬಿಡಬಹುದು ಎಂಬ ಭಯದಿಂದ ಹರಿಣಿ ಮಗುವನ್ನು ಸುಮ್ಮನಿರುವಂತೆ ಗದರಿಸಿದ್ದಳು. ಆದರೆ ಮಗು ಜೋರಾಗಿ ಅಳಲು ಆರಂಭಿಸಿದ ಹಿನ್ನೆಲೆ, ಕೊಲೆ ವಿಚಾರ ಬಯಲಾಗುವ ಆತಂಕದಿಂದ ಮಗುವನ್ನೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಬಳಿಕ ತಂದೆ ಹೃದಯಾಘಾತದಿಂದ ಮಂಚದಿಂದ ಬಿದ್ದು ಮಗುವಿನ ಮೇಲೆ ಬಿದ್ದಂತೆ ಕಾಣುವ ರೀತಿಯಲ್ಲಿ ಶವಗಳನ್ನು ಇರಿಸಿ, ಕ್ರೈಂ ಸೀನ್ ಅನ್ನು ಬೇರೆ ರೀತಿಯಲ್ಲಿ ಬಿಂಬಿಸಲು ಯತ್ನಿಸಲಾಗಿತ್ತು.
ಕೊಲೆಯ ಸಂಪೂರ್ಣ ಸಂಚು ಹಾಗೂ ನಂತರದ ಸಾಕ್ಷ್ಯನಾಶದ ಪ್ರಯತ್ನಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಣಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದ್ದು, ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಬಾಣವಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಆರ್.ಪಿ. ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಮೊಬೈಲ್ ಸರ್ಚ್ ಹಿಸ್ಟರಿ, ಕರೆ ವಿವರಗಳು, ಸಂಪರ್ಕಗಳ ಮಾಹಿತಿ ಹಾಗೂ ಕೊಲೆಗೆ ಸಂಬಂಧಿಸಿದ ಇತರ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ಜೈಲಲ್ಲಿರುವ ಪವಿತ್ರಾ ಗೌಡಗೆ ಮತ್ತೊಂದು ಆಘಾತ ; ಮಾಜಿ ಪತಿ ಸಂಜಯ್ ಸಿಂಗ್ ನಿಧನ.. ಆಗಿದ್ದೇನು?


















