ನವದೆಹಲಿ : ದೆಹಲಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಹಿರಿಯ ನಾಯಕರ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಇತ್ತೀಚೆಗೆ ತಮ್ಮ ರ್‍ಯಾಲಿ ನಡೆದ ನಂತರ ಶ್ರೀ ರಾಮಸೇನೆ ಎಂಬ ಸಂಘಟನೆಯು ‘ಶುದ್ಧೀಕರಣ’ ಪ್ರಕ್ರಿಯೆ ಕೈಗೊಂಡ ಘಟನೆಯನ್ನು ಪಕ್ಷದ ನಾಯಕರು ಬಹಿರಂಗವಾಗಿ ಖಂಡಿಸದೇ, ತಮ್ಮ ಬೆಂಬಲಕ್ಕೆ ನಿಲ್ಲದ ಬಗ್ಗೆ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಯಾರ ಹೆಸರುಗಳನ್ನೂ ನೇರವಾಗಿ ಪ್ರಸ್ತಾಪಿಸದಿದ್ದರೂ, ಸಭೆಯಲ್ಲಿ ಅವರ ಹಾವಭಾವವು ಹಿರಿಯ ನಾಯಕರ ಮೌನದ ಬಗ್ಗೆ ಇದ್ದ ನಿರಾಶೆಯನ್ನು ಎತ್ತಿಹಿಡಿದಿತ್ತು ಎಂದು ಮೂಲಗಳು ತಿಳಿಸಿವೆ.
ಹಲ್ದ್ವಾನಿಯಲ್ಲಿ ಏನು ನಡೆದಿತ್ತು?
ಆಗಸ್ಟ್ 8 ರಂದು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ‘ವಿಜಯ ಶಂಖನಾದ’ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ, ರ್‍ಯಾಲಿ ಮುಗಿದ ಎರಡು ದಿನಗಳ ನಂತರ ‘ಶ್ರೀರಾಮ ಸೇನಾ’ ಎಂಬ ಬಲಪಂಥೀಯ ಸಂಘಟನೆಯು ಖರ್ಗೆ ಅವರು ಮಾತನಾಡಿದ್ದ ವೇದಿಕೆಯಲ್ಲಿ ‘ಶುದ್ಧೀಕರಣ ಹವನ’ ನಡೆಸಿತ್ತು. ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಈ ಕೃತ್ಯ ಎಸಗಲಾಗಿದೆ ಮತ್ತು ಇದು ಬಿಜೆಪಿಯ “ದಲಿತ ವಿರೋಧಿ” ಹಾಗೂ ಅಸ್ಪೃಶ್ಯತೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ದೇಶದ ಹಲವೆಡೆ ಕಾಂಗ್ರೆಸ್ ಘಟಕಗಳಿಂದ ಪ್ರತಿಭಟನೆಯೂ ನಡೆದಿತ್ತು.
ಸಂಸತ್ತಿನಲ್ಲಿ ಖರ್ಗೆ ಭಾವನಾತ್ಮಕ ಮಾತು
ಈ ವಿಚಾರವನ್ನು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ ಖರ್ಗೆ, “ನಾನು ದಲಿತ, ನನಗೆ ರಕ್ಷಣೆ ಕೊಡಿ ಎಂದು ಯಾರ ಬಳಿಯೂ ಭಿಕ್ಷೆ ಬೇಡಿಲ್ಲ, ಹೋರಾಡುವ ಶಕ್ತಿ ನನಗಿದೆ. ಆದರೆ ಹಲ್ದ್ವಾನಿಯಲ್ಲಿ ವೇದಿಕೆ ಶುದ್ಧೀಕರಣ ಮಾಡಿರುವುದು ನನಗೆ ಅಸ್ಪೃಶ್ಯತೆಯ ಕಹಿ ಅನುಭವವನ್ನು ಉಂಟುಮಾಡಿದೆ ಮತ್ತು ನನಗೆ ಅವಮಾನ ಆಗಿದೆ. ಈ ಕೃತ್ಯ ಎಸಗಿದವರ ವಿರುದ್ಧ ಅಸ್ಪೃಶ್ಯತೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಬೇಕು” ಎಂದು ಒತ್ತಾಯಿಸಿದ್ದರು.
ಖರ್ಗೆ ಅವರ ಆರೋಪಕ್ಕೆ ರಾಜ್ಯಸಭೆಯಲ್ಲಿ ಉತ್ತರಿಸಿದ ಕೇಂದ್ರ ಸಚಿವ ಹಾಗೂ ಸದನ ನಾಯಕ ಜೆ.ಪಿ. ನಡ್ಡಾ, ಈ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಬಿಜೆಪಿ ಇಂತಹ ಕೃತ್ಯಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಲ್ಲಿ ಯಾವುದೇ ಬಿಜೆಪಿ ಕಾರ್ಯಕರ್ತರ ಪಾತ್ರವಿಲ್ಲ ಎಂದು ತಿಳಿಸಿದ್ದ ನಡ್ಡಾ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ : ದುಲೀಪ್ ಟ್ರೋಫಿ ಫೈನಲ್ ಪಂದ್ಯ ಚೆನ್ನೈಗೆ ಶಿಫ್ಟ್ : ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಿದ BCCI


















