ಕಲಬುರಗಿ : ಕಾರಿನ ಡಿಕ್ಕಿಯೊಳಗೆ ಸಿಲುಕಿ ಉಸಿರುಗಟ್ಟಿದ ಪರಿಣಾಮ 3 ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶಹಾಬಾದ್ ತಾಲೂಕಿನ ತೋನಸಹಳ್ಳಿ ಎಸ್ ಗ್ರಾಮದಲ್ಲಿ ನಡೆದಿದೆ. ನಿನ್ನೆ ಬೆಳಗ್ಗೆ ನಡೆದ ಈ ದುರಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಸವ ಪ್ರಭು ಮೃತಪಟ್ಟ ಮಗು ಎಂದು ತಿಳಿದುಬಂದಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಸವ ಪ್ರಭು, ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯೊಳಗೆ ಆಟವಾಡುತ್ತಾ ಹೋಗಿದ್ದಾನೆ ಎನ್ನಲಾಗಿದೆ. ಡಿಕ್ಕಿಯೊಳಗೆ ಹೋದ ಕೆಲವೇ ಕ್ಷಣಗಳಲ್ಲಿ ಅದು ಲಾಕ್ ಆಗಿದ್ದು, ಹೊರಬರಲು ಸಾಧ್ಯವಾಗಿಲ್ಲ. ಡಿಕ್ಕಿಯೊಳಗೆ ಸಿಲುಕಿಕೊಂಡಿದ್ದ ಮಗು ಉಸಿರುಗಟ್ಟಿದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಬಾಲಕ ಕಾಣಿಸುತ್ತಿಲ್ಲ ಎಂದು ಆತಂಕಗೊಂಡ ಪೋಷಕರು ಹಾಗೂ ಗ್ರಾಮಸ್ಥರು ಊರಿನಾದ್ಯಂತ ಹುಡುಕಾಟ ನಡೆಸಿದ್ದಾರೆ. ಸಾಕಷ್ಟು ಸಮಯ ಕಳೆದರೂ ಮಗು ಪತ್ತೆಯಾಗದ ಹಿನ್ನೆಲೆ ಅನುಮಾನಗೊಂಡ ಕುಟುಂಬಸ್ಥರು ಕಾರಿನ ಡಿಕ್ಕಿಯನ್ನು ಪರಿಶೀಲಿಸಿದ್ದಾರೆ. ಆಗ ಡಿಕ್ಕಿ ತೆರೆದ ವೇಳೆ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ ಅಷ್ಟರಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ಘಟನೆಯಿಂದ ತೋನಸಹಳ್ಳಿ ಎಸ್ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ನಂಜನಗೂಡಿನಲ್ಲಿ ನಿಲ್ಲದ ಚಿರತೆ ಹಾವಳಿ – ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ!


















