ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಕಣಿವೆ ಗ್ರಾಮದಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದ್ದು, ಮರದ ಪೊದೆಯೊಳಗೆ ನವಜಾತ ಹೆಣ್ಣು ಶಿಶುವೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಮಾರಸ್ವಾಮಿ ದೇವಸ್ಥಾನದ ಸಮೀಪದ ಪೊದೆಯಲ್ಲಿ ಒಂದು ದಿನದ ಹೆಣ್ಣು ಮಗುವನ್ನು ಬಿಟ್ಟು ಹೋಗಿರುವ ಅಮಾನವೀಯ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಕಿಡಿಗೇಡಿಗಳು ಮಗುವನ್ನು ಟವಲ್‌ನಲ್ಲಿ ಸುತ್ತಿ ಮರದ ಪೊದೆಯೊಳಗೆ ಇಟ್ಟು ಹೋಗಿದ್ದು, ಮಗು ಅಳುವ ಶಬ್ದ ಕೇಳಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊದೆಯೊಳಗೆ ಮಗು ಬಿದ್ದಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎನ್.ಆರ್ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಗುವನ್ನು ರಕ್ಷಿಸಿ ತಕ್ಷಣ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿದುಬಂದಿದೆ.
ಯಾರು ಮತ್ತು ಯಾವ ಕಾರಣಕ್ಕೆ ಈ ನವಜಾತ ಶಿಶುವನ್ನು ಪೊದೆಯೊಳಗೆ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್ ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಮಗುವನ್ನು ಬಿಟ್ಟು ಹೋದವರ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ವಚನಾನಂದ ಶ್ರೀ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ದಿಢೀರ್ ವರ್ಗಾವಣೆ!



















