ಗ್ವಾಲಿಯರ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ಮಗನ ಪ್ರಾಣ ತೆಗೆದ ಘೋರ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ತನ್ನ ಅನೈತಿಕ ಸಂಬಂಧದ ವಿಷಯ ಎಲ್ಲಿ ಬಯಲಾಗುತ್ತದೆಯೋ ಎಂಬ ಭಯದಿಂದ ಕೇವಲ 5 ವರ್ಷದ ಮಗುವನ್ನು ಮಹಡಿಯಿಂದ ತಳ್ಳಿ ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜ್ಯೋತಿ ರಾಥೋಡ್ ಎಂಬಾಕೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ರಹಸ್ಯ ಬಯಲಾಗಿದ್ದು ಹೇಗೆ?
ಈ ಕೃತ್ಯವು ಏಪ್ರಿಲ್ 28, 2023ರಂದು ನಡೆದಿತ್ತು. ಪೊಲೀಸ್ ಕಾನ್‌ಸ್ಟೇಬಲ್ ಧ್ಯಾನ್ ಸಿಂಗ್ ರಾಥೋಡ್ ಅವರ ಪತ್ನಿ ಜ್ಯೋತಿ ತನ್ನ ನೆರೆಯ ಉದಯ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಘಟನೆಯ ದಿನ 5 ವರ್ಷದ ಮಗ ಜತಿನ್ ಅಕಸ್ಮಾತಾಗಿ ತನ್ನ ತಾಯಿ ಮತ್ತು ಉದಯ್ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದನ್ನು ನೋಡಿದ್ದನು. ಈ ವಿಷಯವನ್ನು ಮಗ ತನ್ನ ತಂದೆಗೆ ತಿಳಿಸಬಹುದು ಎಂದು ಹೆದರಿದ ಜ್ಯೋತಿ, ಮಗನನ್ನು ಕಟ್ಟಡದ ಎರಡನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದಳು. ಆರಂಭದಲ್ಲಿ ಇದು ಆಕಸ್ಮಿಕವಾಗಿ ಬಿದ್ದು ಸಂಭವಿಸಿದ ಸಾವು ಎಂದು ಬಿಂಬಿಸಲಾಗಿತ್ತು. ಆದರೆ ಮಗನ ಸಾವಿನ ನಂತರ ಪತ್ನಿಯ ನಡವಳಿಕೆಯಲ್ಲಿ ಅನುಮಾನಗೊಂಡ ಪತಿ ಧ್ಯಾನ್ ಸಿಂಗ್, ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪತ್ನಿಯ ರಹಸ್ಯ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಕೊನೆಗೆ ಕೃತ್ಯ ನಡೆದ 15 ದಿನಗಳ ನಂತರ ಜ್ಯೋತಿ ತನ್ನ ಪತಿಯ ಮುಂದೆ ತಪ್ಪೊಪ್ಪಿಕೊಂಡಿದ್ದಳು.
ಮಹತ್ವದ ತೀರ್ಪು
ಪತಿ ಧ್ಯಾನ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಜ್ಯೋತಿ ರಾಥೋಡ್ ವಿರುದ್ಧದ ಸಾಂದರ್ಭಿಕ ಪುರಾವೆಗಳನ್ನು ಮತ್ತು ಆಕೆಯ ಸ್ವಯಂ ಪ್ರೇರಿತ ತಪ್ಪೊಪ್ಪಿಗೆಯನ್ನು ಆಧರಿಸಿ ಆಕೆಯನ್ನು ದೋಷಿ ಎಂದು ಘೋಷಿಸಿತು. ಸರ್ಕಾರಿ ಅಭಿಯೋಜಕರು ಮಗುವಿನ ಕೊಲೆಗೆ ತಾಯಿಯೇ ಕಾರಣ ಎಂಬ ಬಗ್ಗೆ ಬಲವಾದ ಸಾಕ್ಷ್ಯಗಳನ್ನು ಮಂಡಿಸಿದರು.
ಪ್ರೇಮಿಯ ಬಿಡುಗಡೆ
ಈ ಪ್ರಕರಣದಲ್ಲಿ ಜ್ಯೋತಿಯ ಪ್ರೇಮಿ ಉದಯ್ ಇಂಡೋಲಿಯಾ ಎಂಬಾತನನ್ನು ಕೂಡ ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ ಆತನ ವಿರುದ್ಧ ಈ ಕೊಲೆಯಲ್ಲಿ ಭಾಗಿಯಾಗಿರುವ ಬಗ್ಗೆ ಅಥವಾ ಸಂಚು ರೂಪಿಸಿರುವ ಬಗ್ಗೆ ಸೂಕ್ತ ಪುರಾವೆಗಳು ಲಭ್ಯವಿಲ್ಲದ ಕಾರಣ, ನ್ಯಾಯಾಲಯವು ಆತನಿಗೆ ‘ಬೆನಿಫಿಟ್ ಆಫ್ ಡೌಟ್’ (ಸಂದೇಹದ ಲಾಭ) ನೀಡಿ ಬಿಡುಗಡೆ ಮಾಡಿದೆ. ಸದ್ಯ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಜ್ಯೋತಿ ರಾಥೋಡ್ ಜೈಲು ಪಾಲಾಗಿದ್ದಾಳೆ.
ಇದನ್ನೂ ಓದಿ: ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ಮಹಿಳೆಯರು ಪರದಾಟ



















