ಬೆಂಗಳೂರು: ಕೇಂದ್ರ ಸರ್ಕಾರದ ಕೋಟ್ಯಂತರ ನೌಕರರು ಹಾಗೂ ನಿವೃತ್ತ ನೌಕರರಿಗೆ ಕೊನೆಗೂ ಸಿಹಿ ಸುದ್ದಿ ನೀಡಿದೆ. ಕೇಂದ್ರದ ನೌಕರರು ಹಾಗೂ ಪಿಂಚಣಿದಾರರು ಹಲವು ತಿಂಗಳಿಂದ ಕಾಯುತ್ತಿರುವ 8ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ ರಚನೆ ಮಾಡಿದೆ. ಇದರೊಂದಿಗೆ ಮುಂದಿನ 18 ತಿಂಗಳಲ್ಲಿ ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ. ಅದರಂತೆ, ಕೇಂದ್ರ ಸರ್ಕಾರವು ವೇತನವನ್ನು ಹೆಚ್ಚಿಸಲಿದೆ.
ಕಳೆದ ಜನವರಿಯಲ್ಲಿಯೇ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿತ್ತು. ಈಗ ಘೋಷಣೆಯಾದ 10 ತಿಂಗಳ ನಂತರ ಆಯೋಗ ರಚನೆ ಮಾಡಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, 8ನೇ ವೇತನ ಆಯೋಗ ಜಾರಿಯಾದರೆ ಪಿಂಚಣಿದಾರರಿಗೆ ಕನಿಷ್ಠ 25 ಸಾವಿರ ರೂ. ಪಿಂಚಣಿ ಲಭಿಸಲಿದೆ ಎಂದು ತಿಳಿದುಬಂದಿದೆ.
8ನೇ ವೇತನ ಆಯೋಗದ ಪ್ರಸ್ತಾವನೆ ಸಲ್ಲಿಕೆಯ ಅನುಮೋದನೆಯ ಪ್ರಕಾರ ಅನುಷ್ಠಾನವು 2026-27ನೇ ಹಣಕಾಸು ವರ್ಷದಲ್ಲಿ ಆಗುವ ಸಾಧ್ಯತೆಯಿದೆ. ಅಂದಾಜು ಶೇ. 30 ರಿಂದ 34ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ವರದಿಗಳು ಆಗಿವೆ. ಈಗಾಗಲೇ 8ನೇ ವೇತನ ಆಯೋಗ ಘೋಷಣೆಯಾದರೂ ಹಣದುಬ್ಬರ ಮತ್ತು ಇನ್ನೂ ಇತರೆ ಕಾರಣಗಳಿಂದ 8ನೇ ವೇತನ ಆಯೋಗದಲ್ಲಿ ವಿಳಂಬವಾಗುತ್ತಿದೆ. ಉದಾಹರಣೆಗೆ ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ಸಂಬಳ 18 ಸಾವಿರ ರೂ. ಇದ್ದರೆ, ಅದು 8ನೇ ವೇತನ ಆಯೋಗದ ಪ್ರಕಾರ, 54 ಸಾವಿರ ರೂ.ಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ರಕ್ಷಣಾ ಸಿಬ್ಬಂದಿ ಸೇರಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ಫಲಾನುಭವಿಗಳಾಗಿದ್ದಾರೆ. ಇದರೊಂದಿಗೆ, ರಕ್ಷಣಾ ನಿವೃತ್ತರು ಸೇರಿದಂತೆ ಸುಮಾರು 65 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರು ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಂತೂ ಇದೆ. ಸರ್ಕಾರಿ ನೌಕರರ ವೇತನ ರಚನೆಯಲ್ಲಿ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಕೇಂದ್ರ ಸರ್ಕಾರವು ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. ಹಣದುಬ್ಬರ, ಆರ್ಥಿಕತೆಯ ಸ್ಥಿತಿ, ಆದಾಯದ ಅಸಮಾನತೆಗಳು ಮತ್ತು ಸಂಬಂಧಿತ ಸೂಚಕಗಳು ಸೇರಿದಂತೆ ಅಂಶಗಳನ್ನು ಆಯೋಗವು ಪರಿಗಣಿಸುತ್ತದೆ.
ಇದನ್ನೂ ಓದಿ: ಕೇಂದ್ರ ಚುನಾವಣಾ ಆಯುಕ್ತ ಒಬ್ಬ ರಾಜಕೀಯ ಪುಢಾರಿ | ನಾಲಿಗೆ ಹರಿಬಿಟ್ಟ ಯತೀಂದ್ರ ಸಿದ್ದರಾಮಯ್ಯ!



















