ಹೊಸದೆಹಲಿ : ಭಾರತೀಯ ಆಟೋಮೊಬೈಲ್ ಇತಿಹಾಸದ ಅತ್ಯಂತ ಪ್ರಸಿದ್ದ ಬ್ರ್ಯಾಂಡ್ ‘ಟಾಟಾ ಸಿಯೆರಾ‘ ಮಾರುಕಟ್ಟೆಗೆ ಮರಳಿದ ಎರಡೇ ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ. ಪುನರ್ಜನ್ಮ ಪಡೆದಿರುವ ಈ ಎಸ್‌ಯುವಿ ಕೇವಲ 60 ದಿನಗಳ ಅವಧಿಯಲ್ಲಿ 10,000 ಯುನಿಟ್‌ಗಳ ವಿತರಣಾ ಮೈಲಿಗಲ್ಲನ್ನು ದಾಟಿದೆ. ಕಳೆದ ಡಿಸೆಂಬರ್‌ನಲ್ಲಿ ಬುಕ್ಕಿಂಗ್ ಆರಂಭಿಸಿದ್ದ ಟಾಟಾ ಮೋಟಾರ್ಸ್, ಜನವರಿ 15 ರಿಂದ ವಿತರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿತ್ತು. ಗ್ರಾಹಕರಿಂದ ವ್ಯಕ್ತವಾಗಿರುವ ಈ ಅಭೂತಪೂರ್ವ ಪ್ರತಿಕ್ರಿಯೆಯು ಸಿಯೆರಾ ಬ್ರ್ಯಾಂಡ್ ಮೇಲಿರುವ ಕ್ರೇಜ್ ಅನ್ನು ಸಾಬೀತುಪಡಿಸಿದೆ.
ಹಳೆಯ ನೆನಪು, ಹೊಸ ರೂಪ: ಆಕರ್ಷಕ ವಿನ್ಯಾಸ
ಹೊಸ ಸಿಯೆರಾ ತನ್ನ ಹಳೆಯ ‘ಬಾಕ್ಸಿ’ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ, ಇಂದಿನ ತಲೆಮಾರಿಗೆ ತಕ್ಕಂತೆ ಸಂಪೂರ್ಣ ಆಧುನಿಕ ಸ್ಪರ್ಶ ಪಡೆದಿದೆ. ಈ ಎಸ್‌ಯುವಿಯ ಪ್ರಮುಖ ಆಕರ್ಷಣೆಯೇ ಅದರ ಕಿಟಕಿಗಳ ವಿನ್ಯಾಸ. ಹಳೆಯ ಸಿಯೆರಾದಲ್ಲಿದ್ದ ಮೂರು-ನಾಲ್ಕನೇ ಭಾಗದ ಗಾಜಿನ ವಿನ್ಯಾಸವನ್ನು ಈಗ ಪನೋರಮಿಕ್ ಸನ್‌ರೂಫ್ ಮತ್ತು ಫ್ಲಶ್ ಗ್ಲೇಜಿಂಗ್ ಮೂಲಕ ಮರುಸೃಷ್ಟಿಸಲಾಗಿದೆ. ಮುಂಭಾಗದಲ್ಲಿ ಭಾರತದ ಅತ್ಯಂತ ತೆಳುವಾದ (17mm) ಬೈ-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಇಲ್ಯುಮಿನೇಟೆಡ್ ಟಾಟಾ ಲೋಗೋ ಕಾರಿನ ಗಾಂಭೀರ್ಯವನ್ನು ಹೆಚ್ಚಿಸಿವೆ. ಈ ವಿಶಿಷ್ಟ ವಿನ್ಯಾಸಕ್ಕಾಗಿ ಸಿಯೆರಾ ಈಗಾಗಲೇ ‘2025ರ ರೆಡ್ ಡಾಟ್ ಡಿಸೈನ್ ಅವಾರ್ಡ್’ ಅನ್ನು ಮುಡಿಗೇರಿಸಿಕೊಂಡಿದೆ.
ಥಿಯೇಟರ್ ಪ್ರೊ ತಂತ್ರಜ್ಞಾನ ಮತ್ತು ಐಷಾರಾಮಿ ಒಳಾಂಗಣ
ಕಾರಿನ ಒಳಭಾಗವು ತಂತ್ರಜ್ಞಾನದ ಗಣಿಯಂತಿದೆ. ಇಲ್ಲಿ ‘ಥಿಯೇಟರ್ ಪ್ರೊ’ (TheatrePro) ಎಂಬ ಟ್ರಿಪಲ್ ಸ್ಕ್ರೀನ್ ಲೇಔಟ್ ನೀಡಲಾಗಿದೆ. ಇದರಲ್ಲಿ ಎರಡು 12.3 ಇಂಚಿನ ಪರದೆಗಳು ಮತ್ತು ಒಂದು 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಂದೇ ಗ್ಲಾಸ್ ಪ್ಯಾನಲ್ ಅಡಿಯಲ್ಲಿವೆ. ಟಾಟಾದ ಹೊಸ ‘ಆರ್ಗೋಸ್’ (ARGOS) ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗಿರುವ ಈ ಕಾರು, ವಿಶಾಲವಾದ ಕ್ಯಾಬಿನ್ ಸ್ಪೇಸ್ ಹೊಂದಿದೆ. 622 ಲೀಟರ್‌ಗಳ ಬೂಟ್ ಸ್ಪೇಸ್, ಮೃದುವಾದ ಮೆಟೀರಿಯಲ್ ಬಳಸಿ ಮಾಡಿದ ಇಂಟೀರಿಯರ್ ಮತ್ತು ಜೆಬಿಎಲ್‌ನ 12 ಸ್ಪೀಕರ್ ಸೌಂಡ್ ಸಿಸ್ಟಮ್ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡಲಿವೆ.
ಇಂಜಿನ್ ಸಾಮರ್ಥ್ಯ ಮತ್ತು ಪರ್ಫಾರ್ಮೆನ್ಸ್
ಟಾಟಾ ಸಿಯೆರಾ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. 1.5 ಲೀಟರ್ ಹೈಪರಿಯನ್ ಟರ್ಬೊ-ಪೆಟ್ರೋಲ್, ಇದು 160bhp ಶಕ್ತಿ ಮತ್ತು 255Nm ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರ್ ರಿವೋಟ್ರಾನ್ ಪೆಟ್ರೋಲ್, 106bhp ಶಕ್ತಿಯನ್ನು ಹೊಂದಿದ್ದು, ಮ್ಯಾನುಯಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಗಳಲ್ಲಿ ಸಿಗಲಿದೆ.
1.5 ಲೀಟರ್ ಕೈರೋಜೆಟ್ ಡೀಸೆಲ್ : ಇದು 118bhp ಶಕ್ತಿ ಮತ್ತು 280Nm ವರೆಗೆ ಟಾರ್ಕ್ ನೀಡುವ ಸಾಮರ್ಥ್ಯ ಹೊಂದಿದೆ. ಮುಂಬರುವ ದಿನಗಳಲ್ಲಿ ಟಾಟಾ ಸಂಸ್ಥೆಯು ಸಿಯೆರಾದಲ್ಲಿ ‘ಆಲ್ ವೀಲ್ ಡ್ರೈವ್’ (AWD) ಆವೃತ್ತಿಯನ್ನು ಪರಿಚಯಿಸುವುದಾಗಿ ಖಚಿತಪಡಿಸಿದೆ. ಇದು ಕಠಿಣ ರಸ್ತೆಗಳಲ್ಲಿಯೂ ಸರಾಗವಾಗಿ ಚಲಿಸಲು ಸಹಕಾರಿಯಾಗಲಿದೆ.
ಫೀಚರ್‌ಗಳ ಮಹಾಪೂರ
ಗ್ರಾಹಕರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಸಿಯೆರಾದಲ್ಲಿ 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟುಗಳು, ಏರ್ ಪ್ಯೂರಿಫೈಯರ್ ಮತ್ತು ಟಾಟಾ ಪ್ಯಾಸೆಂಜರ್ ವಾಹನಗಳಲ್ಲೇ ಮೊದಲ ಬಾರಿಗೆ ‘ಹೆಡ್-ಅಪ್ ಡಿಸ್‌ಪ್ಲೇ’ (HUD) ನೀಡಲಾಗಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಈ ಎಸ್‌ಯುವಿ ಭಾರತೀಯ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಒಟ್ಟಾರೆಯಾಗಿ, ಟಾಟಾ ಸಿಯೆರಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಅತ್ಯಂತ ಯಶಸ್ವಿಯಾಗಿ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಎಸ್‌ಯುವಿ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸುವ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : ಟ್ರಂಪ್‌ಗೆ ಅಮೆರಿಕ ಕೋರ್ಟ್ ಬಿಗ್ ಶಾಕ್ | 10 ಲಕ್ಷ ಕೋಟಿ ರೂ.ಗೂ ಅಧಿಕ ಅಕ್ರಮ ಸುಂಕ ಮರುಪಾವತಿಗೆ ಆದೇಶ!



















