ಬೆಂಗಳೂರು: ಗಂಟೆಗೆ 160 ಕಿಲೋಮೀಟರ್ ವೇಗ, ಐಷಾರಾಮಿ ಆಸನಗಳು, ಎಸಿ, ಒಳ್ಳೆಯ ಸೇವೆಗಳಿಗೆ ಹೆಸರಾಗಿರುವ ವಂದೇ ಭಾರತ್ ಹೈ-ಸ್ಪೀಡ್ ರೈಲುಗಳು ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ. ಟಿಕೆಟ್ ಬೆಲೆ ಜಾಸ್ತಿ ಇರುವ ಕಾರಣ ಬಡವರು ಈ ರೈಲುಗಳಲ್ಲಿ ಓಡಾಡಲು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಶೀಘ್ರದಲ್ಲೇ ವಂದೇ ಭಾರತ್ ರೈಲುಗಳ ಟಿಕೆಟ್ ಬೆಲೆಯನ್ನು ಇಳಿಕೆ ಮಾಡಲಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಈಗಾಗಲೇ 136 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮಾರ್ಚ್ 31, 2025ರ ತನಕ ಈ ರೈಲುಗಳ ಆಕ್ಯುಪೆನ್ಸಿ ಶೇಕಡಾ 100ಕ್ಕಿಂತ ಹೆಚ್ಚು ಎಂಬುದಾಗಿ ಅಧಿಕೃತ ಡೇಟಾ ತಿಳಿಸಿದೆ. ಹೀಗಿದ್ದೂ ಕೂಡ ಈ ಸೇವೆಗಳ ಟಿಕೆಟ್ ದರ ಸಾಮಾನ್ಯ ರೈಲುಗಳಿಗಿಂತ ಹೆಚ್ಚಾಗಿದ್ದು, ಇದು ಬಡವರಿಗೆ, ಮದ್ಯಮ ವರ್ಗದವರಿಗೆ ಕೈಗೆಟುಕದಷ್ಟು ಎತ್ತರಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಕಾರಣದಿಂದಾಗಿ ಕೇಂದ್ರ ಸರ್ಕಾರವು ರೈಲುಗಳ ಟಿಕೆಟ್ ಬೆಲೆಯನ್ನು ಇಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಣೀಕೃತ ಮಾದರಿಯಲ್ಲಿ ಟಿಕೆಟ್ ಬೆಲೆ ಇಳಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಶ್ರೇಣೀಕೃತ ದರ ಮಾದರಿ ಚಿಂತನೆ ಎಂದರೆ, ಪ್ರಯಾಣಿಕರ ಆದಾಯ ಮಟ್ಟ, ವಯಸ್ಸು ಮತ್ತು ಪ್ರಯಾಣದ ಅವಶ್ಯಕತೆಯನ್ನು ಆಧರಿಸಿ ದರವನ್ನು ನಿಗದಿ ಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು ಎಲ್ಲ ರೀತಿಯ ಪ್ರಯಾಣಿಕರಿಗೂ ಒಂದೇ ರೀತಿಯ ದರ ನಿಗದಿಯಾಗಿತ್ತು. ಆದರೆ ಈ ಶ್ರೇಣೀಕೃತ ದರ ಮಾದರಿಯ ವ್ಯವಸ್ಥೆ ಬಂದರೆ, ಟಿಕೆಟ್ ದರಗಳಲ್ಲಿ ವ್ಯತ್ಯಾಸ ಬರುತ್ತದೆ. ಇದರಲ್ಲಿ ಪ್ರಯಾಣಿಕರ ಆರ್ಥಿಕ ಸ್ಥಿತಿ, ವಯಸ್ಸಿನ ಮೇಲೆ ದರ ನಿಗದಿಯಾಗುತ್ತದೆ. ಉದಾಹರಣೆಗೆ ವಿದ್ಯಾರ್ಥಿಗಳಿಗೆ ವಂದೇ ಭಾರತ್ ರೈಲಿನ ಟಿಕೆಟ್ ದರ ಕಡಿತವಾಗಬಹುದು. ಹಾಗೆಯೇ ಹಿರಿಯ ನಾಗರಿಕರಿಗೆ ಸಬ್ಸಿಡಿ ಸಿಗಬಹುದು. ಇನ್ನು ಗ್ರಾಮೀಣ ಭಾಗದ ಪ್ರಯಾಣಿಕರಿಗೆ ವಿಶೇಷ ಕೊಡುಗೆ ದೊರೆಯಬಹುದು. ಇದರಿಂದ ಬಡವರು-ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಆದರೆ, ಈ ಕುರಿತು ಕೇಂದ್ರ ಸರ್ಕಾರದಿಂದ ಇದುವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.



















