ಬೆಂಗಳೂರು: ಪ್ರತಿ ತಿಂಗಳ ಮೊದಲ ದಿನದಂದು ಹಣಕಾಸಿಗೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗುತ್ತವೆ. ಅದರಂತೆ, ಜುಲೈ 1ರಿಂದ ಹಲವು ಹಣಕಾಸು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ, ಆಧಾರ್ ಅಪ್ಡೇಟ್ ಮಾಡುವವರಿಗೆ, ಕೆಲ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಶುಲ್ಕಗಳು, ನಿಯಮಗಳು ಅನ್ವಯವಾಗುತ್ತವೆ. ಹಾಗಾದರೆ, ಜುಲೈ 1ರಿಂದ ಯಾವೆಲ್ಲ ನಿಯಮಗಳು ಬದಲಾಗುತ್ತಿವೆ? ಜನರಿಗೆ ಇವುಗಳ ಪರಿಣಾಮ ಏನು ಎಂಬುದನ್ನು ತಿಳಿಯೋಣ ಬನ್ನಿ.
• ಆಧಾರ್ ಕಾರ್ಡ್ ಅಪ್ಡೇಟ್ ಶುಲ್ಕ
ಆಧಾರ್ ಕಾರ್ಡ್ ಬಳಕೆದಾರರು ಜುಲೈ 1ರಿಂದ ಉಚಿತವಾಗಿ ಇ-ಮೇಲ್ ಅಡ್ರೆಸ್ಅನ್ನು ಅಪ್ಡೇಟ್ ಮಾಡಬಹುದಾಗಿದೆ. ಜುಲೈ 1ರಿಂದ ಡಿಸೆಂಬರ್ 31ರವರೆಗೆ ಗ್ರಾಹಕರು ಉಚಿತವಾಗಿ ಇ-ಮೇಲ್ ಅಡ್ರೆಸ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿದೆ. ಇದುವರೆಗೆ ಆಧಾರ್ಡ್ ಕಾರ್ಡ್ ಗೆ ಇ-ಮೇಲ್ ವಿಳಾಸವನ್ನು ಅಪ್ಡೇಟ್ ಮಾಡಲು 75 ರೂಪಾಯಿ ಶುಲ್ಕ ಪಾವತಿಸಬೇಕಿತ್ತು. ಇದನ್ನು ವಿಶೇಷ ಗುರುತಿನ ಪ್ರಾಧಿಕಾರವು ಶೂನ್ಯಕ್ಕೆ ಇಳಿಸಿದೆ. ಇದರಿಂದ ಆಧಾರ್ ಬಳಕೆದಾರರಿಗೆ ಹಣ ಉಳಿಯಲಿದೆ.
• ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ನಿಯಮ
ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಜುಲೈ 1ರಿಂದ ಕೆಲ ನಿಯಮಗಳು ಬದಲಾಗಲಿವೆ. ಎಚ್ ಡಿ ಎಫ್ ಸಿ ಬ್ಯಾಂಕಿನ ರೆಗಾಲಿಯಾ ಗೋಲ್ಡ್ ಕಾರ್ಡ್ ಹೊಂದಿರುವವರು ದೇಶೀಯ ವಿಮಾನ ನಿಲ್ದಾಣಗಳ ಲಾಂಜ್ ಗಳಲ್ಲಿ ಉಚಿತ ಪ್ರವೇಶ ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ 60 ಸಾವಿರ ರೂಪಾಯಿ ಖರ್ಚು ಮಾಡಿರಬೇಕು ಎಂದು ಎಚ್ ಡಿ ಎಫ್ ಸಿ ಬ್ಯಾಂಕ್ ಮಾಹಿತಿ ನೀಡಿದೆ.
• ಎಲ್ ಪಿಜಿ ಸಿಲಿಂಡರ್ ಬೆಲೆಯೇರಿಕೆ ಸಾಧ್ಯತೆ
ಪ್ರತಿ ತಿಂಗಳ ಮೊದಲನೇ ತಾರೀಖಿನಿಂದು ದೇಶದ ತೈಲ ಮಾರುಕಟ್ಟೆ ಸಂಸ್ಥೆಗಳು ಅಡುಗೆ ಅನಿಲ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಹಾಗಾಗಿ, ಜುಲೈ 1ರಂದು ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯೇರಿಕೆಯಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ, ಅಮೆರಿಕ-ಇರಾನ್ ಮಧ್ಯೆ ಶಾಂತಿ ಒಪ್ಪಂದವಾಗಿರುವ ಕಾರಣ ಇಳಿಕೆಯಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.



















