ನವದೆಹಲಿ: ಬಾಂಗ್ಲಾದೇಶದಲ್ಲಿ ಗುರುವಾರದಿಂದೀಚೆಗೆ ಆರಂಭವಾದ ಹಿಂಸಾಚಾರದ ವೇಳೆ ಗುಂಪು ಹಲ್ಲೆಗೆ (ಮಾಬ್ ಲಿಂಚಿಂಗ್) ಬಲಿಯಾದ ಹಿಂದೂ ಯುವಕ ದೀಪು ಚಂದ್ರ ದಾಸ್ ವಾಸ್ತವದಲ್ಲಿ ದೈವನಿಂದನೆ ಮಾಡಿರಲಿಲ್ಲ. ಬದಲಾಗಿ, ಸಹೋದ್ಯೋಗಿಯೊಬ್ಬರು ವೈಯಕ್ತಿಕ ದ್ವೇಷಕ್ಕಾಗಿ ಹೊರಿಸಿದ ಸುಳ್ಳು ಆರೋಪವೇ ಈ ಭೀಕರ ಹತ್ಯೆಗೆ ಕಾರಣ ಎಂದು ಬಾಂಗ್ಲಾದೇಶದ ಲೇಖಕಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲಿಮಾ ನಸ್ರೀನ್ ಗಂಭೀರ ಆರೋಪ ಮಾಡಿದ್ದಾರೆ.
ದೀಪು ಚಂದ್ರ ದಾಸ್ ಅವರು ಪೊಲೀಸರ ರಕ್ಷಣೆಯಲ್ಲಿದ್ದಾಗಲೂ ಈ ದುರ್ಘಟನೆ ನಡೆದಿದೆ ಎಂದು ತಸ್ಲಿಮಾ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಮೆನ್‌ಸಿಂಗ್ ಜಿಲ್ಲೆಯ ಭಾಲುಕಾ ಎಂಬಲ್ಲಿನ ಕಾರ್ಖಾನೆಯೊಂದರಲ್ಲಿ ದೀಪು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಮುಸ್ಲಿಂ ಸಹೋದ್ಯೋಗಿಯೊಬ್ಬರು ದೀಪುಗೆ ಪಾಠ ಕಲಿಸಲು ನಿರ್ಧರಿಸಿ, ಜನರ ಗುಂಪಿನ ನಡುವೆ ‘ದೀಪು ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾನೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿದರು ಎಂದು ತಸ್ಲಿಮಾ ವಿವರಿಸಿದ್ದಾರೆ.
ಪೊಲೀಸ್ ರಕ್ಷಣೆಯಲ್ಲಿದ್ದರೂ ತಪ್ಪದ ಸಾವು
ಘಟನೆಯ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ತಸ್ಲಿಮಾ, “ದೀಪು ತಾನು ನಿರಪರಾಧಿ ಎಂದು ಪೊಲೀಸರಿಗೆ ತಿಳಿಸಿದ್ದರು. ಪ್ರವಾದಿಯವರ ಬಗ್ಗೆ ತಾನು ಯಾವುದೇ ಹೇಳಿಕೆ ನೀಡಿಲ್ಲ, ಇದೆಲ್ಲವೂ ಸಹೋದ್ಯೋಗಿಯ ಪಿತೂರಿ ಎಂದು ಅವರು ಹೇಳಿಕೊಂಡಿದ್ದರು. ಪೊಲೀಸರು ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದರು. ಆದರೂ ಉದ್ರಿಕ್ತ ಗುಂಪು ಅವರ ಮೇಲೆ ಮುಗಿಬಿದ್ದು, ಅವರನ್ನು ಎಳೆದಾಡಿ ಹತ್ಯೆ ಮಾಡಿದೆ,” ಎಂದು ಬರೆದುಕೊಂಡಿದ್ದಾರೆ.
ಪೊಲೀಸರ ವರ್ತನೆಯ ಬಗ್ಗೆಯೂ ತಸ್ಲಿಮಾ ಅನುಮಾನ ವ್ಯಕ್ತಪಡಿಸಿದ್ದು, “ಪೊಲೀಸರು ಸುಳ್ಳು ಆರೋಪ ಮಾಡಿದ ಸಹೋದ್ಯೋಗಿಯನ್ನು ಬಂಧಿಸಲಿಲ್ಲ. ಬದಲಾಗಿ, ರಕ್ಷಣೆಯಲ್ಲಿದ್ದ ದೀಪು ಅವರನ್ನು ಉದ್ರಿಕ್ತರ ಕೈಗೆ ಒಪ್ಪಿಸಿದರಾ ಅಥವಾ ಜಿಹಾದಿ ಮನಸ್ಥಿತಿಯ ಗುಂಪು ಪೊಲೀಸರನ್ನು ಬದಿಗೊತ್ತಿ ಠಾಣೆಯಿಂದ ದೀಪು ಅವರನ್ನು ಎಳೆತಂದಿತಾ ಎಂಬುದು ಸ್ಪಷ್ಟವಾಗಬೇಕಿದೆ. ಇದೊಂದು ಜಿಹಾದಿ ಉತ್ಸವದಂತೆ ಕಂಡಿತು,” ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಅತಂತ್ರವಾಯಿತು ಬಡ ಕುಟುಂಬ
ದೀಪು ಚಂದ್ರ ದಾಸ್ ಅವರ ಸಾವಿನಿಂದ ಅವರ ಕುಟುಂಬ ಬೀದಿಗೆ ಬಿದ್ದಂತಾಗಿದೆ. “ದೀಪು ತಮ್ಮ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಅವರ ದುಡಿಮೆಯನ್ನೇ ನಂಬಿ ಅಂಗವಿಕಲ ತಂದೆ, ತಾಯಿ, ಪತ್ನಿ ಮತ್ತು ಮಗು ಬದುಕುತ್ತಿದ್ದರು. ಈಗ ಅವರ ಗತಿ ಏನಾಗಬೇಕು? ಹಂತಕರಿಗೆ ಶಿಕ್ಷೆಯಾಗುತ್ತದೆಯೇ?” ಎಂದು ತಸ್ಲಿಮಾ ಪ್ರಶ್ನಿಸಿದ್ದಾರೆ.
ದೀಪು ಅವರ ಕುಟುಂಬಕ್ಕೆ ಭಾರತಕ್ಕೆ ಪಲಾಯನ ಮಾಡುವಷ್ಟು ಆರ್ಥಿಕ ಶಕ್ತಿಯೂ ಇಲ್ಲ. ಬಡವರಿಗೆ ಯಾವುದೇ ದೇಶವಿಲ್ಲ, ಕೊನೆಗೆ ಧರ್ಮವೂ ಉಳಿಯುವುದಿಲ್ಲ ಎಂದು ತಸ್ಲಿಮಾ ನಸ್ರೀನ್ ತಮ್ಮ ಪೋಸ್ಟ್‌ನಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ಬಿ. ನಾಗೇಂದ್ರಗೆ ED ಬಿಗ್ ಶಾಕ್.. 8 ಕೋಟಿ ಮೌಲ್ಯದ ಆಸ್ತಿ ಜಪ್ತಿ!



















