ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ಕುರ್ಚಿ ಫೈಟ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿದ್ದರಾಮಯ್ಯ ಬಣದ ದಲಿತ ಸಚಿವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟುಹಿಡಿದಿದ್ದು, ಮೇಲಿಂದ ಮೇಲೆ ದೆಹಲಿಗೆ ರೌಂಡ್ಸ್ ಹಾಕುತ್ತಿದ್ದಾರೆ. ಇದರ ಮಧ್ಯೆ ಸಿಎಂ ಆಗಬೇಕೆಂದು ಹಲವು ರೀತಿ ಕಸರತ್ತು ನಡೆಸಿದ್ದ ಡಿ.ಕೆ. ಶಿವಕುಮಾರ್ (DK Shivakumar) ಇದೀಗ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ. ಅವರು ನೀಡಿರುವ ಹೇಳಿಕೆಯೇ ಇಂತಹದ್ದೊಂದು ಮಾತು ಕೇಳಿಬರಲು ಕಾರಣವಾಗಿದೆ. ಹೀಗಾಗಿ ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಬಿದ್ದಂತಾಗಿದೆ.
“ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ. ಅವರೇ ನಮ್ಮ ನಾಯಕರು. ಅವರ ನಾಯಕತ್ವದ ಅವಶ್ಯಕತೆಯು ಪ್ರತಿ ಚುನಾವಣೆಗೂ ಇದೆ. ತಾಲೂಕು ಪಂಚಾಯಿತಿ ಚುನಾವಣೆಯಿಂದ ಹಿಡಿದು, ಸಂಸತ್ ಚುನಾವಣೆವರೆಗೆ ಅವರ ನಾಯಕತ್ವವೇ ನಿರ್ಣಾಯಕ” ಎಂಬುದಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಹಾಗಾಗಿ, ಡಿಕೆಶಿ ಅವರು ಸಿಎಂ ಗಾದಿ ಮೇಲಿನ ಆಸೆಯನ್ನು ಸದ್ಯಕ್ಕೆ ಕೈಬಿಟ್ಟರೇ ಎಂಬ ಪ್ರಶ್ನೆ ಮೂಡುವಂತಾಗಿದೆ.
ಡಿಕೆಶಿ ಹೇಳಿಕೆಗೆ ಕಾರಣಗಳೇನು?
ಡಿ.ಕೆ.ಶಿವಕುಮಾರ್ ಅವರು ಹುಟ್ಟು ಛಲಗಾರ. ಕೆಪಿಸಿಸಿ ಅಧ್ಯಕ್ಷ ಗಾದಿಯಾಗಲಿ, ಡಿಸಿಎಂ ಹುದ್ದೆಯಾಗಲಿ ಅವರಿಗೆ ಸುಮ್ಮನೇ ಒಲಿದಿದ್ದಲ್ಲ. ಆದರೆ, ಸಿದ್ದರಾಮಯ್ಯ ಅವರಂತಹ ನಾಯಕನ ವರ್ಚಸ್ಸಿನ ಎದುರು ಡಿಕೆಶಿ ಯಾಕೋ ಮಂಕಾದಂತೆ ಕಾಣುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುತ್ತಿರುವುದು, ದಲಿತ ಸಿಎಂ ಎಂಬ ಕೂಗು ಕೇಳಿಬರುತ್ತಿರುವುದು, ಕೆಪಿಸಿಸಿ ಹುದ್ದೆಯ ಮೇಲೆಯೇ ಸಿದ್ದು ಆಪ್ತರು ಕಣ್ಣಿಟ್ಟಿರುವುದನ್ನು ನೋಡುವ ಡಿಕೆಶಿ ಅವರು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಪರವಾಗಿ ನಿಂತಿದ್ದಾರೆ. ಎಂ.ಬಿ.ಪಾಟೀಲ್ ಆದಿಯಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕರು ಸಿಎಂ ಪರವಾಗಿದ್ದಾರೆ. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬದಲಾವಣೆಗೆ ಇವರು ಪಟ್ಟು ಹಿಡಿದಿದ್ದಾರೆ. “ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ಬಿಡಲು ಸಿದ್ಧ ಎಂಬುದಾಗಿ ರಾಜಣ್ಣ” ಹೇಳಿದ್ದಾರೆ. ಇದೆಲ್ಲವನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ಅವರು ಈಗ ಸಿಎಂ ಹುದ್ದೆಯ ಮೇಲಿನ ದೃಷ್ಟಿಯನ್ನು ಬೇರೆಡೆ ಹಾಯಿಸುವುದೇ ಸುರಕ್ಷಿತ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.
ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಒಪ್ಪಿದ್ದೇ ಆದರೆ ಈ ವರ್ಷದ ನವೆಂಬರ್ ನಲ್ಲಿ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ವಿದಾಯ ಹೇಳಬೇಕು. ಆದರೆ, ಅವರ ಆಪ್ತರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ಸಿದ್ದರಾಮಯ್ಯ ಅವರು ಕೂಡ ಪಟ್ಟು ಸಡಿಲಿಸುವ ಮನಸ್ಥಿತಿಯಲ್ಲಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೇ ಕಾರಣಕ್ಕೆ ಡಿಕೆಶಿ ಅವರು ಸಿದ್ದರಾಮ್ಯಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ರಾಜಕೀಯದಲ್ಲಿ ಬಯಸಿದ್ದನ್ನು ಪಡೆದೇ ತೀರುವ ಉತ್ಸಾಹದಲ್ಲಿರುವ ಡಿಕೆಶಿ ಅವರು ಮುಂದಿನ ದಿನಗಳಲ್ಲಿ ಯಾವ ನಡೆ ಅನುಸರಿಸುತ್ತಾರೆ ಎಂಬ ಕುತೂಹಲವಂತೂ ಮೂಡಿಸಿದ್ದಾರೆ.
ರಾಜ್ಯ ರಾಜಕಾರಣದ ಜೋಡೆತ್ತು
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲುವು ಸಾಧಿಸಿತು. ಪೂರ್ಣ ಬಹುಮತ ಪಡೆಯಿತು. ಕಾಂಗ್ರೆಸ್ ಗೆಲುವಿಗಾಗಿ ಜೋಡೆತ್ತುಗಳಂತೆ ಹೋರಾಟ ನಡೆಸಿದ್ದರು. ಬಳಿಕ ಸಿಎಂ ಹುದ್ದೆ ವಿಚಾರದಲ್ಲಿ ನಡೆದ ಸರ್ಕಸ್ ಅಷ್ಟಿಷ್ಟಲ್ಲ. ಸಿಎಂ ಸ್ಥಾನ ತಮಗೆ ಬೇಕೆಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ರೆ ಇತ್ತ ಸಿದ್ದರಾಮಯ್ಯ ತಮನ್ನು ಸಿಎಂ ಮಾಡಲೇಬೇಕೆಂದು ಹಠಕ್ಕೆ ಬಿದಿದ್ದರು. ಇದು ನನ್ನ ಕೊನೆ ಚುನಾವಣೆ. ಹೀಗಾಗಿ ಸಿಎಂ ಹುದ್ದೆ ಬೇಕೇ ಬೇಕು ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದರು.
ಹೀಗಾಗಿ ಸಿಎಂ ಸ್ಥಾನದ ಪೈಪೋಟಿ ದೆಹಲಿಯಲ್ಲಿ ಬಾರಿ ಸರ್ಕಸ್ ನಡೆದಿತ್ತು. ಕೊನೆಗೆ ಡಿಕೆ 50:50 ಸೂತ್ರಕ್ಕೆ ಬಂದರು. ಅಂದ್ರೆ ಅಧಿಕಾರ ಹಂಚಿಕೆ. ಎರಡೂವರೆ ವರ್ಷ ಸಿದ್ದರಾಮಯ್ಯ ಬಾಕಿ ಎರೆಡುವರೆ ವರ್ಷ ತಮಗೆ ನೀಡಬೇಕು ಎನ್ನುವ ವಾದವನ್ನು ಹೈಕಮಾಂಡ ಮುಂದಿಟ್ಟಿದ್ದರು. ಆದ್ರೆ ಮೊದಲು ನಾನು ಸಿಎಂ ಆಗ್ಬೇಕು ಎನ್ನುವ ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಹೈ ನಾಯಕರು ಸಿದ್ದರಾಮಯ್ಯನವರನ್ನೇ ಸಿಎಂ ಎಂದು ನಿರ್ಣಯ ಕೈಗೊಂಡರು. ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆ ಸಿದ್ದು ಬಣ ಆಟ ಶುರುವಾಗಿ ಅದು ಬಹಿರಂಗ ಕಾದಾಟಕ್ಕೆ ಹೋಯಿತು. ಕೊನೆಗೆ ದಿಲ್ಲಿ ನಾಯಕರು ಬಂದು ಸರಿ ಮಾಡಿದ್ರು. ಆದರೂ ಸಹ ಅಧಿಕಾರ ಹಂಚಿಕೆ ಕಿಡಿ ಮಾತ್ರ ಪೂರ್ಣ ಹಾರಿರಲಿಲ್ಲ. ಆಗಾಗ ಡಿಕೆ ಬಣದಿಂದ ಸಿಎಂ ಕುಚಿ ಬಾಣ ಹೊರಬರುತಿದ್ದವು. ಈಗ ಡಿಕೆಶಿ ಅವರು ಸೂಕ್ಷ್ಮವಾಗಿ ಗಮನಿಸಿ ಅಳೆದು ತೂಗಿ ಸಿದ್ದರಾಮಯ್ಯ ವಿಚಾರದಲ್ಲಿ ಸಾಫ್ಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.