ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಕರ್ನಾಟಕ ವಿಧಾನಸಭೆ ಸಚಿವಾಲಯಕ್ಕೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ನಾಮಪತ್ರದೊಂದಿಗೆ ಸಲ್ಲಿಸಲಾದ ನಮೂನೆ-26 (Form-26) ಅಫಿಡವಿಟ್‌ನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿಗಳ ಆಸ್ತಿ ಮತ್ತು ಹಣಕಾಸು ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಆಯೋಗದ ನಿಯಮದಂತೆ ಸಲ್ಲಿಸಿರುವ ಅಫಿಡವಿಟ್ ಪರಿಶೀಲಿಸಿದಾಗ, ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು, ಆಸ್ತಿ ವಿವರಗಳು ಹಾಗೂ ಟ್ರಸ್ಟ್‌ನೊಂದಿಗೆ ಹೊಂದಿರುವ ಸಂಬಂಧದ ಕುರಿತು ಅಗತ್ಯ ಮಾಹಿತಿಯನ್ನು ಮರೆಮಾಚಿರುವ ಅನುಮಾನಗಳು ವ್ಯಕ್ತವಾಗಿವೆ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 125A ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿ, ಸಾಲ, ಟ್ರಸ್ಟ್‌ಗಳು, ಸಂಸ್ಥೆಗಳೊಂದಿಗಿನ ಸಂಬಂಧ, ಟ್ರಸ್ಟಿ ಹುದ್ದೆಗಳು, ಆರ್ಥಿಕ ಹಿತಾಸಕ್ತಿಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಈ ನಿಯಮ ಮತದಾರರಿಗೆ ಅಭ್ಯರ್ಥಿಯ ಆರ್ಥಿಕ ಹಾಗೂ ಆಡಳಿತಾತ್ಮಕ ಹಿನ್ನೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವ ಉದ್ದೇಶದಿಂದ ಜಾರಿಯಲ್ಲಿದೆ.

ಕಲಬುರಗಿಯ ಲುಂಬಿನಿಯಲ್ಲಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ 2023ರ ಮಾರ್ಚ್ 31ರ ವೇಳೆಗೆ ಸುಮಾರು 236.86 ಕೋಟಿ ಮೌಲ್ಯದ ನಿವ್ವಳ ಆಸ್ತಿಯನ್ನು ಹೊಂದಿದೆ ಎಂದು ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯೊಂದು ನೀಡಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಟ್ರಸ್ಟ್ ಹೆಸರಿನಲ್ಲಿ ಸ್ಥಿರಾಸ್ತಿ, ಚರಾಸ್ತಿ, ಬ್ಯಾಂಕ್ ಠೇವಣಿಗಳು ಹಾಗೂ ಇತರೆ ಆರ್ಥಿಕ ಸಂಪನ್ಮೂಲಗಳಿವೆ ಎಂದು ದಾಖಲೆಗಳಲ್ಲಿ ಹೇಳಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರು ಮುನ್ನಡೆಸುತ್ತಿರುವ ಈ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಸಂಪೂರ್ಣವಾಗಿ ಒಂದು ಕುಟುಂಬದ ಹಿಡಿತದಲ್ಲಿರುವ ಸಂಸ್ಥೆಯಾಗಿದೆ. ಇದು ಸಾರ್ವಜನಿಕ ಚಾರಿಟೇಬಲ್ ಉದ್ದೇಶಗಳಿಗಿಂತ ಹೆಚ್ಚಾಗಿ ಕುಟುಂಬದ ಆಸ್ತಿ ಮತ್ತು ಹಿತಾಸಕ್ತಿಗಳನ್ನು ಒಳಗೊಂಡಿದೆ.
ಈ ಟ್ರಸ್ಟ್‌ನಲ್ಲಿ ಕೋಟ್ಯಂತರ ರೂಪಾಯಿಗಳ ಆರ್ಥಿಕ ವಹಿವಾಟುಗಳು ಮತ್ತು ಆಸ್ತಿ ವರ್ಗಾವಣೆಗಳು ನಡೆದಿರುವುದು ಸ್ಪಷ್ಟ ದಾಖಲೆಗಳಿಂದ ತಿಳಿದುಬರುತ್ತದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಚುನಾವಣಾ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಲ್ಲಿಸಿರುವ ಆಸ್ತಿ ಘೋಷಣಾ ಪತ್ರದಲ್ಲಿ (Affidavit – Form 26) ಈ ಕೋಟ್ಯಂತರ ರೂಪಾಯಿಗಳ ಹಣಕಾಸಿನ ವಹಿವಾಟು, ಟ್ರಸ್ಟ್‌ನಲ್ಲಿ ಹೊಂದಿರುವ ಹಿತಾಸಕ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಅಸ್ತಿಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದೆ ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಟ್ರಸ್ಟ್ ಡೀಡ್, ಟ್ರಸ್ಟಿಗಳ ಪಟ್ಟಿ, ವಾರ್ಷಿಕ ವರದಿಗಳು, ಆದಾಯ ತೆರಿಗೆ ದಾಖಲೆಗಳು, ಆಡಿಟ್ ವರದಿಗಳು ಹಾಗೂ ಇತರೆ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಯಾಗಿ ಅಥವಾ ಬೇರೆ ಯಾವುದೇ ಜವಾಬ್ದಾರಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಪರಿಶೀಲನೆ ವೇಳೆ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಬಹಿರಂಗಪಡಿಸದೇ ಇರುವುದು ಅಥವಾ ಅಪೂರ್ಣ ಮಾಹಿತಿ ನೀಡಿರುವುದು ಕಂಡುಬಂದಲ್ಲಿ, ಜನಪ್ರತಿನಿಧಿ ಕಾಯ್ದೆ, ಚುನಾವಣಾ ಆಯೋಗದ ಮಾರ್ಗಸೂಚಿಗಳು ಹಾಗೂ ಅನ್ವಯವಾಗುವ ಇತರೆ ಕಾನೂನುಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜೊತೆಗೆ, ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸಿ ಅಗತ್ಯವಿದ್ದರೆ ಕಾನೂನು ಕ್ರಮ ಜರುಗಿಸಬೇಕು ಎಂದು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : CBSE ವೆಬ್‌ಸೈಟ್ ದೋಷ ಪತ್ತೆಹಚ್ಚಿದ್ದ ಯುವಕ ನಿಸರ್ಗ ಅಧಿಕಾರಿ ಈಗ IIT ಕಾನ್ಪುರದಲ್ಲಿ ಉದ್ಯೋಗಿ!



















