ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳಿರುವಂತೆಯೇ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡೆಯೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಕಾರ್ಯಕ್ರಮವೊಂದರಲ್ಲಿ ತಮಗೆ ನೀಡಲಾದ ಮುಸ್ಲಿಂ ಸಾಂಪ್ರದಾಯಿಕ ಟೋಪಿಯನ್ನು ಧರಿಸಲು ಅವರು ನಿರಾಕರಿಸಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಹಿಂದೆ ಇಫ್ತಾರ್ ಕೂಟಗಳಲ್ಲಿ ಹಾಗೂ ಇಸ್ಲಾಮಿಕ್ ಕಾರ್ಯಕ್ರಮಗಳಲ್ಲಿ ಇಂತಹ ಟೋಪಿಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಿದ್ದ ನಿತೀಶ್ ಅವರ ಈ ನಡೆ, ಅವರ “ಜಾತ್ಯತೀತ ನಿಲುವಿನ” ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತುವಂತೆ ಮಾಡಿದೆ.
ಪಾಟ್ನಾದಲ್ಲಿ ನಡೆದ ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಶತಮಾನೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಮಂಡಳಿಯ ಸದಸ್ಯರೊಬ್ಬರು ನಿತೀಶ್ ಕುಮಾರ್ ಅವರ ತಲೆಗೆ ಟೋಪಿ ಹಾಕಲು ಪ್ರಯತ್ನಿಸುತ್ತಾರೆ. ಆದರೆ, ಮುಖ್ಯಮಂತ್ರಿಗಳು ಅದನ್ನು ನಿರಾಕರಿಸಿ, ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ವೇದಿಕೆಯಲ್ಲಿ ಫೋಟೋ ತೆಗೆಸಿಕೊಂಡ ನಂತರ, ಬಿಹಾರದ ಅಲ್ಪಸಂಖ್ಯಾತ ಸಚಿವ ಜಮಾ ಖಾನ್ ಅವರು ಮತ್ತೆ ನಿತೀಶ್ ಕುಮಾರ್ ಅವರಿಗೆ ಟೋಪಿ ಧರಿಸುವಂತೆ ಮನವೊಲಿಸಲು ಪ್ರಯತ್ನಿಸುತ್ತಾರೆ. ಆಗಲೂ ನಿರಾಕರಿಸಿದ ನಿತೀಶ್, ಆ ಟೋಪಿಯನ್ನು ತೆಗೆದು ಜಮಾ ಖಾನ್ ಅವರ ತಲೆಗೆ ಇಟ್ಟಿರುವುದು ಕಂಡುಬರುತ್ತದೆ.
ಈ ಘಟನೆಯು ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.18ರಷ್ಟಿರುವ ಮುಸ್ಲಿಂ ಸಮುದಾಯವು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ವರ್ಷಗಳಿಂದ ಇಫ್ತಾರ್ ಕೂಟಗಳಲ್ಲಿ ನಿತೀಶ್ ಕುಮಾರ್ ಟೋಪಿ ಧರಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಆದರೆ, ಕಳೆದ ವರ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ ನಂತರ ಅವರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ. ಪದೇಪದೇ ಮೈತ್ರಿ ಬದಲಿಸಿದ್ದಕ್ಕಾಗಿ ‘ಪಲ್ಟು ಚಾಚಾ’ ಎಂದೇ ಕರೆಯಲ್ಪಡುವ ನಿತೀಶ್ ಅವರ ಈ ನಡೆ, ಹೊಸ ರಾಜಕೀಯ ಸಮೀಕರಣದ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ, ವಕ್ಫ್ ಆಸ್ತಿಗಳ ನಿರ್ವಹಣೆಯ ಮೇಲೆ ಸರ್ಕಾರದ ಹಿಡಿತವನ್ನು ಹೆಚ್ಚಿಸುವ ವಕ್ಫ್ ಮಸೂದೆಗೆ ಜೆಡಿಯು ಬೆಂಬಲ ಸೂಚಿಸಿದ ನಂತರ, ಮುಸ್ಲಿಂ ಸಮುದಾಯದ ಒಂದು ವರ್ಗವು ಜೆಡಿಯು ಪಕ್ಷದಿಂದ ದೂರ ಸರಿದಿದೆ. ಈ ಮಸೂದೆಗೆ ಬೆಂಬಲ ನೀಡಿದ್ದನ್ನು ವಿರೋಧಿಸಿ, ಜೆಡಿಯುನ ಐವರು ಮುಸ್ಲಿಂ ನಾಯಕರು ಈ ವರ್ಷದ ಆರಂಭದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಗಳ ಸರಣಿಗೆ ಇದೀಗ ಟೋಪಿ ನಿರಾಕರಿಸಿದ ಘಟನೆಯೂ ಸೇರಿಕೊಂಡಿರುವುದು, ನಿತೀಶ್ ಕುಮಾರ್ ಅವರ ರಾಜಕೀಯ ಕಾರ್ಯತಂತ್ರದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.


















