ಬೀಜಿಂಗ್ : ಗಂಟೆಗೆ 700 ಕಿಮೀ ವೇಗದಲ್ಲಿ ಸಾಗಿ ಚೀನಾದ ರೈಲು ವಿಶ್ವ ದಾಖಲೆ ಬರೆದಿದೆ. ಚೀನಾ ತನ್ನ ಅತ್ಯಂತ ವೇಗದ ಮ್ಯಾಗ್ಲೆವ್ ರೈಲು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪಾಸ್ ಆಗಿ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದೆ.
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಮ್ಯಾಗ್ನೆಟಿಕ್ ಲೆವಿಟೇಶನ್ ರೈಲಿನಲ್ಲಿ ಈ ಪರೀಕ್ಷೆಯನ್ನು ನಡೆಸಿದ್ದಾರೆ. ಕೇವಲ 400 ಮೀಟರ್ ಉದ್ದದ ಟ್ರ್ಯಾಕ್‌ನಲ್ಲಿ ಈ ವೇಗವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ರೈಲನ್ನು ನಿಲ್ಲಿಸಲಾಗಿದೆ. ಸುಮಾರು 1,000 ಕೆಜಿ ತೂಕದ ಈ ರೈಲು ಕೇವಲ ಎರಡೇ ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.
ಇದು ‘ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್’ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಇದು ಇದುವರೆಗಿನ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್ ರೈಲು ಎಂದು ಪರಿಗಣಿಸಲಾಗಿದೆ. ಇದರ ವೇಗವರ್ಧನೆ ಎಷ್ಟು ಹೆಚ್ಚಾಗಿದೆ ಅಂದ್ರೆ ಅದು ರಾಕೆಟ್ ಅನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ರೈಲು ಮಿಂಚಿನಂತೆ ಹಾದು ಹೋಗಿದ್ದು, ನೋಡುಗರಿಗೆ ಇದು ಸಿನಿಮಾಯ ದೃಶ್ಯದಂತೆ ಕಂಡಿದೆ.
ಇದೇ ಎಲೆಕ್ಟ್ರೋಮ್ಯಾಗ್ನೆಟಿಕ್ ತಂತ್ರಜ್ಞಾನವನ್ನು ರಾಕೆಟ್‌ಗಳನ್ನು ಉಡಾವಣೆ ಮಾಡಲು ಬಳಸಬಹುದು ಎಂದು ಹೆಚ್ಚಿನವರು ಈ ಬಗ್ಗೆ ಸಲಹೆ ನೀಡಿದ್ದಾರೆ. ಈ ಯೋಜನೆಯ ಬಗ್ಗೆ ಹಿಂದೆ ಚೀನಾದ ವಿಜ್ಞಾನಿಗಳು ಕಳೆದ 10 ವರ್ಷಗಳಿಂದ ಶ್ರಮ ಪಟ್ಟಿದ್ದರು. ಇದೇ ವರ್ಷದ ಜನವರಿಯಲ್ಲಿ ಈ ರೈಲು 648 ಕಿ.ಮೀ ವೇಗ ಪ್ರಯಾಣ ಮಾಡಿತ್ತು. ಇದೀಗ 700 ಕಿ.ಮೀ ವೇಗ ತಲುಪುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ಹೆಸರು ಮಾಡಿದೆ.



















