ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಸದಸ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 2024-25ನೇ ಹಣಕಾಸು ವರ್ಷದಲ್ಲಿ ಪಿಎಫ್ ಸದಸ್ಯರಿಗೆ ಶೇ.8.25ರಷ್ಟು ಬಡ್ಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರೊಂದಿಗೆ ಇಪಿಎಫ್ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತಕ್ಕೆ ಶೇ.8.25ರಷ್ಟು ಬಡ್ಡಿಯ ಲಾಭ ಪಡೆಯಲಿದ್ದಾರೆ. ಇದರಿಂದ ಸುಮಾರು 7 ಕೋಟಿ ಪಿಎಫ್ ಸದಸ್ಯರಿಗೆ ಅನುಕೂಲವಾಗಲಿದೆ.
ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ 237ನೇ ಸಭೆಯಲ್ಲಿ ಬಡ್ಡಿದರದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಂಡಾವೀಯ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. ಈ ತೀರ್ಮಾನವು ಪಿಎಫ್ ಸದಸ್ಯರಿಗೆ ಸಿಹಿ ಸುದ್ದಿ ಎನಿಸಿದೆ.
ಕೇಂದ್ರ ಸರ್ಕಾರವು ಪಿಎಫ್ ಮೊತ್ತಕ್ಕೆ ನೀಡುವ ಬಡ್ಡಿದರವನ್ನು ಆಗಾಗ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ. 2022-23ನೇ ಹಣಕಾಸು ವರ್ಷದಲ್ಲಿ ಪಿಎಫ್ ಮೊತ್ತಕ್ಕೆ ಶೇ.8.1ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿತ್ತು. ಇದಾದ ಬಳಿಕ ಪಿಎಫ್ ಬಡ್ಡಿದರವನ್ನು ಶೇ.8.25ಕ್ಕೆ 2024ರ ಫೆಬ್ರವರಿಯಲ್ಲಿ ಏರಿಕೆ ಮಾಡಲಾಗಿತ್ತು. ಈಗ ಇದೇ ಬಡ್ಡಿದರವನ್ನು 2024-25ನೇ ಸಾಲಿಗೂ ನೀಡಲು ತೀರ್ಮಾನಿಸಲಾಗಿದೆ.
ಪಿಎಫ್ ಮೊತ್ತವು ಖಾಸಗಿ ವಲಯದ ಉದ್ಯೋಗಿಗಳಿಗೆ ಉಳಿತಾಯ ಹಾಗೂ ನಿವೃತ್ತಿ ನಂತರದ ಪಿಂಚಣಿ ದೃಷ್ಟಿಯಿಂದ ವರದಾನವಾಗಿದೆ. ಉದ್ಯೋಗಿಯ ಬೇಸಿಕ್ ಸಂಬಳದ ಶೇ.12ರಷ್ಟು ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಗೆ ಜಮೆ ಮಾಡಲಾಗುತ್ತದೆ. ಇಷ್ಟೇ ಮೊತ್ತವನ್ನು ಕಂಪನಿ ಕೂಡ ಉದ್ಯೋಗಿಯ ಪಿಎಫ್ ಖಾತೆಗೆ ವರ್ಗಾಯಿಸುತ್ತದೆ. ಇದರಲ್ಲಿ ಒಂದಷ್ಟು ಭಾಗವು ಪಿಂಚಣಿಗೂ ಜಮೆಯಾಗುತ್ತದೆ. ನಿವೃತ್ತಿ ಬಳಿಕ ಪಿಂಚಣಿಯ ಮೊತ್ತವು ಉದ್ಯೋಗಿಯ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತದೆ.



















