ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಷಾಢಕ್ಕೂ ಮುನ್ನವೇ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಕಾಂಗ್ರೆಸ್ ಶಾಸಕರಲ್ಲಿ ಭಾರೀ ಕಾತುರ ಮೂಡಿದ್ದು, ಕಳೆದ ಕೆಲವು ದಿನಗಳಿಂದ ತೆರೆಮರೆಯ ಲಾಬಿ ಚಟುವಟಿಕೆಗಳು ಜೋರಾಗಿವೆ.
ವಿದೇಶ ಪ್ರವಾಸದಿಂದ ನಿನ್ನೆ ವಾಪಸ್ಸಾದ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಲು ಈ ವಾರದಲ್ಲೇ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಜುಲೈ 14ರೊಳಗೆ ಸಚಿವ ಸಂಪುಟ ವಿಸ್ತರಣೆ ನಡೆಯಬಹುದು ಎಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.
ಸಚಿವ ಸ್ಥಾನಕ್ಕಾಗಿ ಹಿರಿಯ ಹಾಗೂ ಹೊಸ ಶಾಸಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಸಿದ್ದರಾಮಯ್ಯ ಬಣದ ಶಾಸಕರು ಮತ್ತೊಮ್ಮೆ ಸಚಿವ ಸ್ಥಾನಕ್ಕಾಗಿ ಒತ್ತಡ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಭಾವ್ಯ ಸಚಿವರ ಮೊದಲ ಹಂತದ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿಯೂ ಕೇಳಿಬರುತ್ತಿದೆ. ದೆಹಲಿ ಭೇಟಿಗೂ ಮುನ್ನ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನಡುವೆ ಪ್ರತ್ಯೇಕ ಸಭೆ ನಡೆಯುವ ಸಾಧ್ಯತೆ ಇದೆ.
ಪ್ರಸ್ತುತ ಸುಮಾರು 20 ಸಚಿವ ಸ್ಥಾನಗಳಿಗೆ 40ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದು, ಯಾರು ಸಚಿವರಾಗುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಇನ್ನೊಂದು ವಾರದಲ್ಲೇ ಸಚಿವ ಸ್ಥಾನಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಲ್ಲಿ ಆಕಾಂಕ್ಷಿ ಶಾಸಕರು ಹಾಗೂ ರಾಜಕೀಯ ವಲಯ ಕಾದು ನೋಡುತ್ತಿದೆ.
ಇದನ್ನೂ ಓದಿ : ರಾಜ್ಯ ಪಾಲಿಟಿಕ್ಸ್‌ಗೆ ಹೆಚ್‌ಡಿಕೆ ರಿಟರ್ನ್.. ಡಿಕೆಶಿ ಸಿಎಂ ಆದ ಬೆನ್ನಲ್ಲೇ ಪುಲ್ ಆಕ್ಟೀವ್!


















