ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಂಗಳವಾರ ತಿಳಿಸಿವೆ.
ಪ್ರಸ್ತುತ ಜೆ.ಪಿ. ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, 2020ರ ಜನವರಿಯಿಂದ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು.
ಮೂಲಗಳ ಪ್ರಕಾರ, ಪಕ್ಷದ ವರಿಷ್ಠರು ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯ ನಂತರ ಈ ಕುರಿತ ಸಮಾಲೋಚನಾ ಪ್ರಕ್ರಿಯೆ ಪುನರಾರಂಭಗೊಳ್ಳಲಿದೆ. ಬಳಿಕ ಹೊಸ ಅಧ್ಯಕ್ಷರ ಆಯ್ಕೆಗೆ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.
ಮೊದಲು ರಾಜ್ಯಾಧ್ಯಕ್ಷರ ನೇಮಕ
ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ, ಉತ್ತರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಂತಹ ಪ್ರಮುಖ ರಾಜ್ಯಗಳಿಗೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ರಾಜ್ಯಗಳ ಬಿಜೆಪಿ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಿದ್ದು, ಕರ್ನಾಟಕ ಸೇರಿ ಮತ್ತೆ ಕೆಲವು ರಾಜ್ಯಗಳಲ್ಲಿ ಆಯ್ಕೆ ಇನ್ನೂ ಬಾಕಿಯಿದೆ. ರಾಜ್ಯಾಧ್ಯಕ್ಷರ ಆಯ್ಕೆ ಮುಗಿಯುತ್ತಿದ್ದಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಿಂದ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನಿಂದ ಬಿಜೆಪಿಯ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ಅವರಿಬ್ಬರೂ ಹೊಸ ಅಧ್ಯಕ್ಷರ ನಾಮಪತ್ರಕ್ಕೆ ಸೂಚಕರಾಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆಯುತ್ತಾರೆ.
ಯಾರಾಗಬಹುದು ಹೊಸ ಅಧ್ಯಕ್ಷ?
ಜಾತಿ, ಪ್ರಾದೇಶಿಕ ಅಥವಾ ಸಾಮಾಜಿಕ ಸಮೀಕರಣಗಳ ಆಧಾರದ ಮೇಲೆ ಆಯ್ಕೆ ನಡೆಯಬಾರದು ಎಂಬುದು ವರಿಷ್ಠರ ಇಚ್ಛೆಯಾಗಿದೆ. ಬದಲಿಗೆ, ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಸಾಮರ್ಥ್ಯವಿರುವ ವ್ಯಕ್ತಿಗೆ ಈ ಜವಾಬ್ದಾರಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಆಯ್ಕೆಯಾಗುವ ಹೆಸರು ಅಚ್ಚರಿ ಮೂಡಿಸುವ ಸಾಧ್ಯತೆ ಕಡಿಮೆ. ರಾಷ್ಟ್ರಮಟ್ಟದಲ್ಲಿ ಸಂಘಟನಾ ಅನುಭವವನ್ನು ಸಾಬೀತುಪಡಿಸಿರುವ ಹಿರಿಯ ನಾಯಕರೊಬ್ಬರಿಗೆ ಈ ಸ್ಥಾನ ಸಿಗಲಿದೆ ಎನ್ನಲಾಗಿದೆ.
ಆದಾಗ್ಯೂ, ಒಂದು ವೇಳೆ ಬಿಹಾರ ಚುನಾವಣೆ ಘೋಷಣೆಗೂ ಮುನ್ನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ನೇಮಕಾತಿಯನ್ನು ಚುನಾವಣೆಯ ನಂತರಕ್ಕೆ ಮುಂದೂಡಲಾಗುವುದು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.