ಬೆಂಗಳೂರು : ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯೊಂದು ನಡೆದಿದೆ. ಇನ್ನುಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ನೀವು ಯುಪಿಐ ಮೂಲಕ ಯಾವುದೇ ಅಡೆತಡೆಯಿಲ್ಲದೆ ಪಾವತಿ ಮಾಡಬಹುದು. ಹೌದು, ಭಾರತ್ ಪೇ (BharatPe) ಮತ್ತು ಯೆಸ್ ಬ್ಯಾಂಕ್ (YES BANK) ಜಂಟಿಯಾಗಿ ಈ ವಿಶೇಷ ಸೌಲಭ್ಯವನ್ನು ಗ್ರಾಹಕರಿಗೆ ಪರಿಚಯಿಸಿವೆ.
ಏನಿದು ಹೊಸ ಸೌಲಭ್ಯ?
ಭಾರತ್‌ಪೇ ಮತ್ತು ಯೆಸ್ ಬ್ಯಾಂಕ್ ಸಹಯೋಗದಲ್ಲಿ ‘ಭಾರತ್‌ಪೇ ಫ್ಲೆಕ್ಸ್’ (BharatPe Flex) ಎಂಬ ಹೊಸ ಯುಪಿಐ ಕ್ರೆಡಿಟ್ ಲೈನ್ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಇದು ಗ್ರಾಹಕರಿಗೆ ತುರ್ತು ಸಂದರ್ಭಗಳಲ್ಲಿ ಹಣಕಾಸಿನ ನೆರವು ನೀಡಲು ಜಾರಿಗೊಳಿಸಲಾದ ಡಿಜಿಟಲ್ ಕ್ರೆಡಿಟ್ ವ್ಯವಸ್ಥೆಯಾಗಿದೆ.
ಪ್ರಮುಖ ವೈಶಿಷ್ಟ್ಯಗಳು
ಬಡ್ಡಿ ರಹಿತ ಅವಧಿ: ಈ ಸೌಲಭ್ಯದ ಅಡಿಯಲ್ಲಿ ಗ್ರಾಹಕರು ಬಳಸಿದ ಹಣದ ಮೇಲೆ 45 ದಿನಗಳವರೆಗೆ ಯಾವುದೇ ಬಡ್ಡಿ ಪಾವತಿಸಬೇಕಿಲ್ಲ.
ಹಣದ ಲಭ್ಯತೆ: ಬ್ಯಾಂಕ್ ಖಾತೆಯಲ್ಲಿ ಹಣದ ಕೊರತೆಯಿದ್ದರೂ, ಈ ಕ್ರೆಡಿಟ್ ಲೈನ್ ಮೂಲಕ ಸುಲಭವಾಗಿ ಪೇಮೆಂಟ್ ಮಾಡಬಹುದು.
ಅನುಕೂಲಕರ ವ್ಯವಸ್ಥೆ: ಇದು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದಲ್ಲದೆ, ಗ್ರಾಹಕರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆ.
ಸಾಮಾನ್ಯವಾಗಿ ನಾವು ಯುಪಿಐ ಮೂಲಕ ಪೇಮೆಂಟ್ ಮಾಡುವಾಗ ಮೊತ್ತವು ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, ಈ ಹೊಸ ಸೌಲಭ್ಯದ ಅಡಿಯಲ್ಲಿ ಗ್ರಾಹಕರು ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ತಮಗೆ ಮಂಜೂರಾದ ಸಾಲದ ಮಿತಿಯನ್ನು ಬಳಸಿ ತಕ್ಷಣವೇ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಇದು ಕ್ರೆಡಿಟ್ ಕಾರ್ಡ್ ಮಾದರಿಯ ಸೌಲಭ್ಯವಾಗಿದೆ. ಇದನ್ನು ಬಳಸಲು ಗ್ರಾಹಕರು ಭಾರತ್ ಪೇ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಬಹುದು.
ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು, ಆನ್ ಲೈನ್ ಶಾಪಿಂಗ್ ವೇಳೆ ಹಣ ಪಾವತಿಸಲು, ವಿದ್ಯುತ್-ನೀರಿನ ಬಿಲ್ ಕಟ್ಟಲು, ಮೊಬೈಲ್ ರಿಚಾರ್ಜ್ ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪಾವತಿ ಮಾಡಲು ಇದನ್ನು ಬಳಸಬಹುದಾಗಿದೆ. 45 ದಿನಗಳವರೆಗೆ ಯಾವುದೇ ಬಡ್ಡಿ ಇರುವುದಿಲ್ಲ. ಹೆಚ್ಚಿನ ಹಣ ಖರ್ಚು ಮಾಡಿದ್ದರೆ ಅದನ್ನು ಮರುಪಾವತಿಸಲು ಇಎಂಐ ಕೂಡ ಲಭ್ಯವಿರುತ್ತದೆ.
ಗಮನಿಸಿ: ಖಾಸಗಿ ಸಂಸ್ಥೆಗಳು ಆರಂಭಿಸಿರುವ ಹೊಸ ಸೌಲಭ್ಯದ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ನಾವು ಲೇಖನ ಪ್ರಕಟಿಸಿದ್ದೇವೆ. ಹೊಸ ಆ್ಯಪ್ ಬಳಕೆ ಬಗ್ಗೆ ನಾವು ಶಿಫಾರಸು ಮಾಡುತ್ತಿಲ್ಲ.
ಇದನ್ನೂ ಓದಿ : ನೀವು ಯಾವಾಗ PF ಖಾತೆಯಲ್ಲಿ 100 ಪರ್ಸೆಂಟ್ ಹಣ ವಿತ್ ಡ್ರಾ ಮಾಡಬಹುದು? ಇಲ್ಲಿದೆ ಮಾಹಿತಿ!



















