ಕಸ ಸಂಗ್ರಹಣೆ ವಿಷಯದಲ್ಲಿ ಬೆಂಗಳೂರಿನ ಮಾನ ಹರಾಜಾಗುತ್ತಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಸರ್ಕಾರ ಹಾಗೂ ಬಿಬಿಎಂಪಿ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಮನೆ ಮನೆಗೆ ಕಸ ಸಂಗ್ರಹಿಸಲು ಪೌರಕಾರ್ಮಿಕರು ಬಂದಾಗ ಕಸ ಹಾಕಲೇಬೇಕು. ಇಲ್ಲವಾದರೆ, ಮನೆಯ ಮಾಲೀಕರಿಗೆ ನೋಟಿಸ್ ನೀಡಲು ಅಥವಾ ದಂಡ ಹಾಕಲು ನಿರ್ಧರಿಸಲಾಗಿದೆ. ಕಳೆದ ವಾರ ಬಿಡುಗಡೆಯಾಗಿದ್ದ ಸ್ವಚ್ಚ ಸರ್ವೇಕ್ಷಣ ವರದಿಯಲ್ಲಿ ದೇಶದ 4ನೇ ಕಲುಷಿತ ನಗರ ಎಂಬ ಕಳಂಕವನ್ನು ಬೆಂಗಳೂರು ನಗರ ಎದುರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಡಿಸಿಎಂ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆದಿದ್ದು, ದಂಡಾಸ್ತ್ರ ಪ್ರಯೋಗಿಸಲು ನಿರ್ಧರಿಸಲಾಗಿದೆ. ಜೊತೆಗೆ ಹಾಟ್ ಸ್ವಾಟ್ ಗಳನ್ನು ಗುರುತಿಸಿ ಮಾರ್ಷಲ್ ಗಳ ನಿಯೋಜಿಸುವುದು, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಾತ್ರಿ ವೇಳೆ ಗಸ್ತು ತಿರುಗುವುದಕ್ಕೆ ನಿರ್ಧರಿಸಲಾಗಿದೆ. ಕಟ್ಟಡಗಳ ತ್ಯಾಜ್ಯ ವಿಲೇವಾರಿಗೂ ಬ್ರೇಕ್ ಹಾಕಲಾಗಿದೆ.


















