ಬೆಂಗಳೂರು: ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ವ್ಯಕ್ತಿ ಸುಟ್ಟುಕರಕಲಾಗಿರುವ ಘಟನೆ ನಡೆದಿದೆ.
ರಾಜಸ್ಥಾನ ಮೂಲದ ಮದನ್ ಸಿಂಗ್ ಮೃತಪಟ್ಟಿ ವ್ಯಕ್ತಿ. ವಾಣಿಜ್ಯ ಕಟ್ಟಡದ 3ನೇ ಅಂತಸ್ಥಿನಲ್ಲಿದ್ದ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಮಳಿಗೆಯಲ್ಲೇ ಇದ್ದ ಮದನ್ ಸಿಂಗ್ ಸಾವನ್ನಪ್ಪಿದ್ದಾನೆ. ಅಷ್ಟಲ್ಲದೇ, ದುರಂತ ನಡೆದ ಮಳಿಗೆಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಟ್ಟು ನಾಲ್ವರು ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಪತಿ, ಪತ್ನಿಯೊಂದಿಗೆ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದರೊಂದಿಗೆ ಸ್ಥಳದಲ್ಲಿ ಮೂರು ಅಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ.
ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವ ಹಿನ್ನೆಲೆ ರಕ್ಷಣಾ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ದುರಂತ ನಡೆದ ಮಳಿಗೆಯಲ್ಲಿ ತಾಯಿ-ಮಗು ಒಳಗೆ ಸಿಲುಕಿದ್ದಾರೆಂದು ಹೇಳಲಾಗುತ್ತಿದೆ. ಅವಘಡಕ್ಕೆ ಇನ್ನೂ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ.



















