ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತ ಪ್ರವಾಸದಲ್ಲಿರುವಾಗಲೇ, ಅಮೆರಿಕವು ಇಂಡೋ-ಪೆಸಿಫಿಕ್ ಭಾಗದ ಭದ್ರತೆಯಲ್ಲಿ ಭಾರತದ ಪಾತ್ರವನ್ನು ಪುನರುಚ್ಚರಿಸಿದೆ. ಸುಂಕ ಮತ್ತು ವ್ಯಾಪಾರ ಸಂಬಂಧಿ ಭಿನ್ನಾಭಿಪ್ರಾಯಗಳ ನಡುವೆಯೂ, ಭಾರತದೊಂದಿಗೆ ವಾಣಿಜ್ಯ ಮತ್ತು ಇತರೆ ಸಂಬಂಧಗಳನ್ನು ಬಲಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ವರದಿ ತಿಳಿಸಿದೆ.
ನವೆಂಬರ್ ತಿಂಗಳ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ವರದಿಯಲ್ಲಿ ‘ಕ್ವಾಡ್’ (Quad) ಒಕ್ಕೂಟದ ಮಹತ್ವವನ್ನು ಉಲ್ಲೇಖಿಸಲಾಗಿದೆ. ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕನ್ನೊಳಗೊಂಡ ಈ ಒಕ್ಕೂಟದ ಮೂಲಕ ಇಂಡೋ-ಪೆಸಿಫಿಕ್ ಭಾಗದ ಭದ್ರತೆಯನ್ನು ಕಾಪಾಡುವುದು ಅಮೆರಿಕದ ಆದ್ಯತೆಯಾಗಿದೆ. “ಯಾವುದೇ ಒ೦ದು ರಾಷ್ಟ್ರದ ಪ್ರಾಬಲ್ಯವನ್ನು ತಡೆಯಲು ಮತ್ತು ನಮ್ಮ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡಲು ನವದೆಹಲಿಯೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳುವುದು ಅವಶ್ಯಕ,” ಎಂದು ವರದಿಯಲ್ಲಿ ಹೇಳಲಾಗಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಎದುರಾಳಿ ರಾಷ್ಟ್ರಗಳ ನಿಯಂತ್ರಣವು ಭದ್ರತಾ ಸವಾಲಾಗಿ ಪರಿಣಮಿಸಬಹುದು ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ವಿಶ್ವದ ಪ್ರಮುಖ ವಾಣಿಜ್ಯ ಮಾರ್ಗಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಸಂಚಾರಕ್ಕೆ ತೊಂದರೆಯಾದರೆ ಅಥವಾ ಏಕಪಕ್ಷೀಯವಾಗಿ ಮಾರ್ಗವನ್ನು ಮುಚ್ಚಿದರೆ ಅದು ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಈ ಸಮಸ್ಯೆಯನ್ನು ಎದುರಿಸಲು ಭಾರತದಿಂದ ಜಪಾನ್‌ವರೆಗಿನ ರಾಷ್ಟ್ರಗಳ ಸಹಕಾರ ಮತ್ತು ನೌಕಾಪಡೆಯ ಸಾಮರ್ಥ್ಯ ಹೆಚ್ಚಳದ ಅಗತ್ಯವಿದೆ ಎಂದು ವರದಿ ಪ್ರತಿಪಾದಿಸಿದೆ.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತದ ನಿರ್ಧಾರ ಮತ್ತು ಅಮೆರಿಕ ವಿಧಿಸಿರುವ ಸುಂಕದ ಕುರಿತು ಉಭಯ ದೇಶಗಳ ನಡುವೆ ಶೀತಲ ಸಮರ ಏರ್ಪಟ್ಟಿರುವ ಸಂದರ್ಭದಲ್ಲೇ ಈ ವರದಿ ಹೊರಬಿದ್ದಿದೆ. ಇದೇ ವೇಳೆ, ಮೇ ತಿಂಗಳಲ್ಲಿ ನಡೆದ ಸಂಘರ್ಷದ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆ ನಡೆಸಿದ್ದು ತಾನೇ ಎಂದು ಟ್ರಂಪ್ ಮಾಡಿದ್ದ ಪ್ರತಿಪಾದನೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಸ್ಲಾಮಾಬಾದ್ ಕದನ ವಿರಾಮಕ್ಕೆ ಅಂಗಲಾಚಿದ್ದರಿಂದಲೇ ತಾನು ದಾಳಿಯನ್ನು ನಿಲ್ಲಿಸಿದ್ದಾಗಿ ಭಾರತ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಇದಲ್ಲದೆ, ಆಫ್ರಿಕಾದಲ್ಲಿನ ನಿರ್ಣಾಯಕ ಖನಿಜಗಳ (Critical Minerals) ವಿಚಾರದಲ್ಲಿಯೂ ಭಾರತದ ಸಹಕಾರವನ್ನು ಅಮೆರಿಕ ಎದುರುನೋಡುತ್ತಿದೆ.
ಇದನ್ನೂ ಓದಿ: ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್



















