ಶಿವಮೊಗ್ಗ : ಜಿಲ್ಲೆಯ ಸಿಗಂದೂರು ಸೇತುವೆಯ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಆಂಧ್ರಪ್ರದೇಶ ಮೂಲದ ಯುವಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬಂದಿದ್ದ ಆಂಧ್ರಪ್ರದೇಶದ ರಾಯದುರ್ಗ ನಿವಾಸಿ ಉಮೇಶ್ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ಸಿಗಂದೂರು ಸೇತುವೆಯ ಕೆಳಭಾಗದ ಮುಳುಗಡೆ ಪ್ರದೇಶದಲ್ಲಿ ಉಮೇಶ್ ಈಜಾಡಲು ನೀರಿಗೆ ಇಳಿದಿದ್ದರು. ಈ ವೇಳೆ ನೀರಿನ ತೀವ್ರ ಸೆಳತಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಜೊತೆಯಲ್ಲಿದ್ದವರು ತಕ್ಷಣ ಸ್ಥಳೀಯರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸಾಗರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದರು. ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನಡೆದ ಕೆಲ ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಉಮೇಶ್ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ SDRF ಸಿಪಿಐ ನೇಣು ಬಿಗಿದು ಆತ್ಮಹತ್ಯೆ!



















