ಡಾ. ಬಿ.ಆರ್. ಅಂಬೇಡ್ಕರ್ ಹಮ್ಮಿಕೊಂಡಿದ್ದ ಚಳುವಳಿ ತುಂಬಾ ವಿಶೇಷ ಹಾಗೂ ಪರಂಪರೆಯ ಹಿನ್ನೆಲೆ ಹೊಂದಿವೆ ಎಂದು ರಾಜ್ಯ ಸರ್ಕಾರದ ಭಾಷಾಂತರ ಇಲಾಖೆಯ ನಿರ್ದೇಶಕ ಡಾ. ಎಂ.ವೆಂಕಟೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ‘ದಲಿತ ಪ್ಯಾಂಥರ್ಸ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯೇ ಚಳುವಳಿಗಳ ಪರಂಪರೆ. ಇದು ನಿನ್ನೆ ಹುಟ್ಟಿದ್ದಲ್ಲ. ಇಸ್ಲಾಂ, ರಾಜಾಡಳಿತ, ವಸಾಹತುಶಾಹಿ, ಬ್ರಿಟಿಷರ ವಿರುದ್ಧ ಬಂಡೆದ್ದ ಹೋರಾಟಗಳು ನಮ್ಮ ಮುಂದೆ ಇರುವುದೇ ಇದಕ್ಕೆ ಸಾಕ್ಷಿ. ಸ್ಥಳೀಯ ಆಡಳಿತಗಳ ವಿರುದ್ಧ ನಡೆದ ಪ್ರತಿಭಟನೆಗಳು ಭಾರತೀಯರ ಆಶಯಕ್ಕೆ ಪೂರಕವಾಗಿ ನಡೆದಿವೆ. ಭಾರತೀಯ ಚಳುವಳಿಯ ಪರಂಪರೆಗೆ ಗಾಂಧಿ ಹಾಗೂ ಅಂಬೇಡ್ಕರ್ ಎರಡು ಕಣ್ಣುಗಳು ಹಾಗೂ ದಾರಿಗಳು ಎಂದು ಬಣ್ಣಿಸಿದ್ದಾರೆ.
ಭಾರತೀಯ ಚಳುವಳಿಗಳ ಇತಿಹಾಸದಲ್ಲಿ ಈ ಎರಡು ಕಣ್ಣುಗಳು ಸಾಕಷ್ಟು ದೂರದೃಷ್ಟಿ ಬಿತ್ತಿವೆ. ಗಾಂಧಿ ಅಹಿಂಸಾ ಚಳುವಳಿಯನ್ನು ಅಸ್ತ್ರವಾಗಿಸಿಕೊಂಡಿದ್ದರು. ಅಂಬೇಡ್ಕರ್ ಅವರು ವಿಭಿನ್ನ ಹಾಗೂ ವಿಶೇಷ ಪರಂಪರೆಯ ಚಳುವಳಿಯನ್ನು ನಡೆಸಿದರು. ಹೀಗಾಗಿ ಹಲವಾರು ದಾಖಲೆಗಳನ್ನು ಅವರು ಬರೆದರು. ಅಂಬೇಡ್ಕರ್ ಅವರ ಸಾಂಕೇತಿಕ ಚಳುವಳಿಗೂ ಇಂದಿಗೂ ಮನ ಮುಟ್ಟುವಂತಿವೆ. ಆ ಸಾಂಕೇತಿಕ ಚಳುವಳಿ ನೀರು ಮುಟ್ಟುವುದರ ಮೂಲಕ ಆರಂಭವಾಗುತ್ತದೆ.
ನಮಗೆ ಅಗತ್ಯವಾಗಿರುವುದು ಬೇಕು ಎನ್ನುವುದರ ಮೂಲಕ ಪ್ರತಿಭಟನೆಯನ್ನು ಅವರು ತೋರಿಸಿದ್ದಾರೆ. ನೀರನ್ನು ಮುಟ್ಟುವ ಮೂಲಕ ಸಾಂಕೇತಿಕವಾಗಿ ಮಾಡುವ ಪ್ರತಿಭಟನೆ ಎಲ್ಲಿಯೂ ನಡೆದಿಲ್ಲ. ಹೀಗಾಗಿಯೇ ಅಂಬೇಡ್ಕರ್ ಇಂದಿಗೂ ವಿಶೇಷವಾಗಿ ನಿಂತುಕೊಳ್ಳುತ್ತಾರೆ. ಅಂಬೇಡ್ಕರ್ ಚಳುವಳಿ ತುಂಬಾ ವಿಶೇಷವಾಗಿ ಹಾಗೂ ಪರಂಪರೆಯಿಂದ ಹುಟ್ಟಿಕೊಂಡಿರುವ ಚಳುವಳಿ. ಅವರು ತಮ್ಮ ಶೃದ್ಧೆ ಹಾಗೂ ಬದ್ಧತೆಯನ್ನು ಸಮಾಜಕ್ಕೆ ಉತ್ತಮವಾಗಿ ತೋರಿಸಿದ್ದಾರೆ. ಈ ತರಹದ ಚಳುವಳಿಗಳು ಧುತ್ ಎಂದು ಹುಟ್ಟುವುದಿಲ್ಲ. ಭಾರತದ ಭಕ್ತಿ ಚಳುವಳಿಗಳು ತುಂಬಾ ಪ್ರಭಾವ ಬೀರಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದಲ್ಲಿ ವಚನ ಚಳುವಳಿಯ ದೊಡ್ಡ ಪರಂಪರೆಯಿದೆ. ದಲಿತ ಚಳುವಳಿಯಲ್ಲಿ ವಚನ ಚಳುವಳಿಯ ಪ್ರಭಾವ ಇರುವುದರಿಂದಲೇ ಯಾವುತ್ತೂ ದಲಿತ ಚಳುವಳಿ ಹಿಂಸೆಗೆ ಇಳಿಯಲಿಲ್ಲ. ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟರು. ಆದರೆ, ದಲಿತರು ಯಾರನ್ನೂ ಸುಡಲಿಲ್ಲ. ಬಸವಣ್ಣನಂತಹ ದಾರ್ಶನಿಕ ವ್ಯಕ್ತಿ, ದೊಡ್ಡ ಚಳುವಳಿ ಕಟ್ಟಿರುವ ದೊಡ್ಡ ಪರಂಪರೆ ದಲಿತರ ಹಿಂದೆ ಇತ್ತು. ಹೀಗಾಗಿ ದಲಿತರು ಹಿಂಸೆಯನ್ನು ಆಯುಧವನ್ನಾಗಿ ಆಯ್ಕೆ ಮಾಡಿಕೊಳ್ಳಲಿಲ್ಲ. ಬಸವಣ್ಣನ ಪರಂಪರೆ ದಲಿತ ಚಳುವಳಿಗಳ ಮೇಲೆ ಪ್ರಭಾವ ಬೀರಿದ್ದರಿಂದಾಗಿಯೇ ಬೇರೆ ಸ್ವರೂಪದ ಆಯಾಮ ಸಿಗಲಿಲ್ಲ ಎಂದಿದ್ದಾರೆ.
ಮರಾಠಿಗೂ ಭಕ್ತಿ ಚಳುವಳಿಯ ಹಿನ್ನೆಲೆ ಇದೆ. ಪಂಡರಾಪುರದಲ್ಲಿ ಭಕ್ತಿ ಚಳುವಳಿ ಇತ್ತು. ಇಂತಹ ಚಳುವಳಿಗಳು ಸಮಾಜಿಕ ಪ್ರಭಾವ ಬೀರಿವೆ. ಮಾನವೀಯ ಮೌಲ್ಯ ಚಳುವಳಿಗಳು ಹುಟ್ಟಲು ನಮ್ಮ ಸಂಸ್ಕೃತಿಯೇ ಕಾರಣ. ಹೀಗಾಗಿ ಚಳುವಳಿಗಳು ಪ್ರಭಲ ಅಸ್ತ್ರ ಉಳಿಸಿಕೊಂಡು ಬಂದವು. ಸುಧಾರಣಾ ಚಳುವಳಿ, ದಲಿತೇತರ ಹೋರಾಟಗಳು ಕೂಡ ದಲಿತರಿಗೆ ಅನುಕೂಲ ಮಾಡಿವೆ. ದಲಿತೇತರ ಹೋರಾಟಗಳ ಸಹಾಯ ಹಸ್ತಗಳು ದಲಿತರಿಗೂ ದಾರಿ ಮಾಡಿವೆ. ಫುಲೆ ಇರಲಿಲ್ಲ ಅಂದರೆ ಅಂಬೇಡ್ಕರ್ ಇರಲಿಲ್ಲ. ದಲಿತೇತರರು ದಲಿತರ ಬಗ್ಗೆ ಇರುವ ಕಾಳಜಿಗಳು, ಮಾನವೀಯ ಮೌಲ್ಯ ಉಳಿಸುವಂತೆ ಮಾಡಿವೆ. ರಾಜಕೀಯ, ಧನದಾಹಕ್ಕಾಗಿ ಬೇರೆ ಬೇರೆ ಕಾರಣಗಳೂ ಚಳುವಳಿಗಳನ ನಡೆಯುತ್ತಿವೆಯಾದರೂ ಬಹುತೇಕ ಚಳುವಳಿಗಳು ಮಾನವೀಯ ನೆಲೆಗಟ್ಟಿನ ಮೇಲೆ ಇವೆ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿರುವ ನಿರ್ಣಯ ಬೇರೆ ಚಳುವಳಿಗಳಿಗಳಿಗೆ ಕೂಡ ಅರ್ಥಪೂರ್ಣ ವ್ಯಯ ಸಿಗುತ್ತದೆ ಎಂಬುವುದನ್ನು ತೋರಿಸುತ್ತದೆ. 1700ಕ್ಕೂ ಅಧಿಕ ಭೂಮಿಯ ಡಿ ನೋಟಿಫಿಕೇಶನ್ ಮರಳಿ ಪಡೆದಿರುವುದೇ ಇದಕ್ಕೆ ಸಾಕ್ಷಿ ಎನ್ನಬಹುದು ಎಂದು ಹೇಳಿದ್ದಾರೆ.
‘ದಲಿತ ಪ್ಯಾಂಥರ್ಸ್’ ಕೃತಿಯು ಭಾರತ ವಸಾಹತುಶಾಹಿ ಆಳ್ವಿಕೆಯಿಂದ ಸ್ವತಂತ್ರಗೊಂಡು ಇನ್ನೂ ಎರಡೂವರೆ ದಶಕಗಳಷ್ಟೇ ಆಗಿದ್ದಾಗ, ದೇಶದ ಸಾಮಾಜಿಕ-ರಾಜಕೀಯ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದ ಒಂದು ಬಹು ಮಹತ್ವದ ಸಾಮಾಜಿಕ ಚಳುವಳಿ ಪ್ರಸ್ತುತ ಪಡಿಸುತ್ತದೆ. ಸ್ವತಂತ್ರ ಭಾರತ ಒಂದು ಗಣತಂತ್ರವಾಗಿ ತನ್ನ ಮುಂದಿಟ್ಟುಕೊಂಡ ಸ್ವಾತಂತ್ರ‍್ಯ, ಸಮಾನತೆ, ಸೋದರತ್ವ ಮತ್ತು ಸಾಮಾಜಿಕ ನ್ಯಾಯದ ಗುರಿಗಳಿಂದ ದೂರ ಸರಿಯುತ್ತಿದ್ದುದರ ವಿರುದ್ಧ ಯುವಜನರ, ಅದರಲ್ಲೂ ತಳ ಸಮುದಾಯಗಳಿಂದ ಬಂದ ಯುವಜನರ ಹತಾಶೆ ಮತ್ತು ಕ್ರೋಧಕ್ಕೆ 1972 ರಿಂದ 1975ರ ನಡುವೆ ಗಟ್ಟಿ ದನಿ ನೀಡಿದ, ಅವರಲ್ಲಿ ಸಮರೋತ್ಸಾಹವನ್ನು ತುಂಬಿದ ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ್ ಪುಸ್ತಕ ಬಿಡುಗಡೆ ಮಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಅನುವಾದಕ ಡಾ.ಸದಾಶಿವ ಮರ್ಜಿ, ಪ್ರಕಾಶಕ ಕ್ರಿಯಾ ಮಾಧ್ಯಮದ ವಸಂತರಾಜ ಎನ್.ಕೆ ಸೇರಿದಂತೆ ಹಲವರು ಭಾಗವಹಿಸಿದ್ದರು.



















