ಬಹ್ರೈಚ್ (ಉತ್ತರ ಪ್ರದೇಶ): ನರಭಕ್ಷಕ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಾಕಿದ್ದ ಬೋನಿನಲ್ಲಿ ಚಿರತೆಯ ಬದಲು ಕುಡುಕನೊಬ್ಬ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ರಾತ್ರಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.
ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿನೊಳಗೆ ಮನುಷ್ಯನೊಬ್ಬ ಹೋದಾಗ ಆಕಸ್ಮಿಕವಾಗಿ ಬಾಗಿಲು ಮುಚ್ಚಿಕೊಂಡಿದ್ದು, ಆತ ಸುಮಾರು ಎರಡು ಗಂಟೆಗಳ ಕಾಲ ಪಂಜರದೊಳಗೆ ನರಳಾಡುವಂತಾಯಿತು.
ಚಿರತೆ ಹಾವಳಿ: ಹಿನ್ನೆಲೆ ಏನು?
ಉತ್ತರ ಪ್ರದೇಶದ ಕತರ್ನಿಯಾಘಾಟ್ ವನ್ಯಜೀವಿ ಧಾಮದ (Katarniaghat Wildlife Sanctuary) ಗಡಿಯಲ್ಲಿರುವ ಗ್ರಾಮವೊಂದರಲ್ಲಿ ಈ ಘಟನೆ ವರದಿಯಾಗಿದೆ. ಬುಧವಾರ ಸಂಜೆ ಶಾಂತಿ ದೇವಿ (55) ಎಂಬ ಮಹಿಳೆ ಚಿರತೆ ದಾಳಿಗೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ನರಭಕ್ಷಕ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಗ್ರಾಮದ ಹೊರವಲಯದಲ್ಲಿ ದೊಡ್ಡದಾದ ಲೋಹದ ಬೋನನ್ನು ಇರಿಸಿತ್ತು. ಚಿರತೆಯನ್ನು ಆಕರ್ಷಿಸಲು ಬೋನಿನ ಒಳಗೆ ಮೇಕೆಯೊಂದನ್ನು ಎರೆಯಾಗಿ ಕಟ್ಟಲಾಗಿತ್ತು.
ಬೋನಿಗೆ ಬಿದ್ದಿದ್ದು ಯಾರು?
ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಅದೇ ಗ್ರಾಮದ ನಿವಾಸಿ ಪ್ರದೀಪ್ ಎಂದು ಗುರುತಿಸಲಾಗಿದೆ. ಘಟನೆಯ ಸಮಯದಲ್ಲಿ ಈತ ಕಂಠಪೂರ್ತಿ ಮದ್ಯಪಾನ ಮಾಡಿದ್ದ ಎಂದು ಹೇಳಲಾಗಿದೆ. ಮದ್ಯದ ಅಮಲಿನಲ್ಲಿ ಬೋನಿನತ್ತ ತೆರಳಿದ ಪ್ರದೀಪ್, ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡಿದೆ. ಪರಿಣಾಮವಾಗಿ, ಚಿರತೆಗಾಗಿ ಮೀಸಲಾಗಿದ್ದ ಪಂಜರದಲ್ಲಿ ಆತ ಬಂಧಿಯಾಗಿದ್ದಾನೆ.
ಮೇಕೆ ಕಳ್ಳತನದ ಶಂಕೆ?
ಪ್ರದೀಪ್ ಬೋನಿನೊಳಗೆ ಹೋಗಲು ನಿಖರ ಕಾರಣವೇನು ಎಂಬ ಬಗ್ಗೆ ಭಿನ್ನ ಹೇಳಿಕೆಗಳು ಕೇಳಿಬಂದಿವೆ: ಎರೆಯಾಗಿ ಕಟ್ಟಿದ್ದ ಮೇಕೆಯನ್ನು ಕದಿಯುವ ಉದ್ದೇಶದಿಂದ ಪ್ರದೀಪ್ ಬೋನಿನೊಳಗೆ ಹೋಗಿರಬಹುದು ಅಥವಾ ಮೇಕೆಯನ್ನು ಎಳೆಯಲು ಪ್ರಯತ್ನಿಸಿದಾಗ ಬಾಗಿಲು ಮುಚ್ಚಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಆದರೆ, ಬೋನಿನೊಳಗೆ ಸಿಕ್ಕಿಬಿದ್ದ ಪ್ರದೀಪ್, ತಾನು ಕೇವಲ ಪರಿಸ್ಥಿತಿಯನ್ನು ಪರಿಶೀಲಿಸಲು ಹೋಗಿದ್ದೆ. ಆ ಸಮಯದಲ್ಲಿ ತಲೆ ಸುತ್ತು ಬಂದಂತಾಗಿ ಬೋನಿನೊಳಗೆ ಸಿಕ್ಕಿಹಾಕಿಕೊಂಡೆ ಎಂದು ಹೇಳಿಕೊಂಡಿದ್ದಾನೆ.
ಎರಡು ಗಂಟೆಗಳ ರಕ್ಷಣಾ ಕಾರ್ಯಾಚರಣೆ
ಬೋನಿನೊಳಗೆ ಲಾಕ್ ಆಗುತ್ತಿದ್ದಂತೆಯೇ ಗಾಬರಿಗೊಂಡ ಪ್ರದೀಪ್ ಜೋರಾಗಿ ಕಿರುಚಾಡಿದ್ದಾನೆ. ನಂತರ ತನ್ನ ಮೊಬೈಲ್ ಫೋನ್ ಬಳಸಿ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಗ್ರಾಮದ ಮುಖಂಡರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರ ಜಂಟಿ ತಂಡ, ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಪ್ರದೀಪ್‌ನನ್ನು ಸುರಕ್ಷಿತವಾಗಿ ಬೋನಿನಿಂದ ಹೊರತೆಗೆದಿದ್ದಾರೆ. ಸದ್ಯ ಈ ಘಟನೆಯು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದರೆ, ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ; ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಮೂರ್ತಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ



















