ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಕುಕ್ಕುಟೋದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಕೋಳಿ ಮಾಂಸ ಮತ್ತು ಮೊಟ್ಟೆ ಪ್ರಿಯರಿಗೆ ದರ ಏರಿಕೆ ಶಾಕ್ ಎದುರಾಗುವ ಸಾಧ್ಯತೆಯಿದೆ. ಕೋಳಿ ಮಾಂಸದ ದರ ಕೆಜಿಗೆ 40 ರಿಂದ 50 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಯಿದ್ದು, ಮೊಟ್ಟೆ ದರ ಒಂದಕ್ಕೆ 3 ರಿಂದ 4 ರೂಪಾಯಿ ಏರಿಕೆಯಾಗುವ ಸಂಭವ ಹೆಚ್ಚಿದೆ. ಮೆಕ್ಕೆಜೋಳ ಮತ್ತು ಸೋಯಾಬೀನ್ ದರ ಏರಿಕೆಯಿಂದ ಪಶು ಆಹಾರದ ಬೆಲೆ ಟನ್ಗೆ 15 ಸಾವಿರ ರೂಪಾಯಿ ಹೆಚ್ಚಳವಾಗಿದೆ.
ನಿರ್ವಹಣಾ ವೆಚ್ಚ ಹೆಚ್ಚಳದಿಂದ ಸಾಕಾಣಿಕೆದಾರರು ಕಂಗಾಲಾಗಿದ್ದು, ದೇಶದ ಶೇ. 20 ರಿಂದ 25ರಷ್ಟು ಕೋಳಿ ಫಾರಂಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕೋಳಿ ಆಹಾರ ಘಟಕಗಳ ಉತ್ಪಾದನೆಯಲ್ಲಿ ಶೇ. 15 ರಿಂದ 20ರಷ್ಟು ಇಳಿಕೆಯಾಗಿದ್ದು, ಆಹಾರದ ಬೇಡಿಕೆಯಲ್ಲೂ ಭಾರಿ ಕುಸಿತ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಮತ್ತು ಸೋಯಾಬೀನ್ ದಾಸ್ತಾನಿಗೆ ಮಿತಿ ಹೇರುವಂತೆ ಕುಕ್ಕುಟೋದ್ಯಮವು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ.


















